ಮೌನವಾದ ಮೆಟ್ರೋ ಕಂಠ – ಅಕಾಲಿಕವಾಗಿ ಕನ್ನಡಿಗರನ್ನಗಲಿದ ಅಪರ್ಣಾ
ಕನ್ನಡಿಗರಲ್ಲಿ ಯಾರಿಗೆ ಅಪರ್ಣಾ ಎಂದರೆ ಗೊತ್ತಿಲ್ಲ ಹೇಳಿ. ಇಡೀ ಕರ್ನಾಟಕದಲ್ಲಿ ಅಪರ್ಣಾ ಅವರ ಸ್ವರವನ್ನು ಕೇಳದವರೇ ಇಲ್ಲ. ನಟಿಯಾಗಿ, ನಿರೂಪಕಿಯಾಗಿ, ಕಂಠದಾನ ಕಲಾವಿದೆಯಾಗಿ ಗುರುತಿಸಿಕೊಂಡ ಅಪ್ಪಟ ಕನ್ನಡದ ಕಂಠ ಅಪರ್ಣಾ, ಇಂದು ಅಕಾಲಿಕವಾಗಿ ಕನ್ನಡಿಗರನ್ನು ಅಗಲಿ ಶಾಶ್ವತವಾಗಿ ಮೌನಲೋಕದತ್ತ ಪ್ರಯಾಣಿಸಿದ್ದಾರೆ.
ಹೌದು. ಮಸಣದ ಹೂವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ಅನಂತರ ಹಲವು ಚಿತ್ರಗಳಲ್ಲಿ ನಟಿಸಿದ ಅಪರ್ಣಾ, ಕನ್ನಡಿಗರ ಪಾಲಿಗೆ ಬಹುಮುಖ ಪ್ರತಿಭೆಯಾಗಿಯೇ ಗುರುತಿಸಿಕೊಂಡವರು.
ನಿರೂಪಣೆಯಲ್ಲಿ ಕನ್ನಡನಾಡು ಕಂಡ ಒಬ್ಬ ಶ್ರೇಷ್ಠ ನಿರೂಪಕಿಯಾಗಿ ಹೆಸರಾದ ಅಪರ್ಣಾ, ಒಂದೇ ಒಂದು ಆಂಗ್ಲ ಶಬ್ದ ಬಳಸದೇ ನಿರೂಪಣೆ ಮಾಡಬಹುದಾದ ಸಾಮರ್ಥ್ಯವುಳ್ಳ ಅಪರೂಪದ ಕಲಾವಿದೆಯಾಗಿದ್ದರು. ಸರ್ಕಾರಿ, ಸಾಂಸ್ಕೃತಿಕ, ಸಭೆ ಸಮಾರಂಭಗಳಿಗೆ ಅತಿ ಬೇಡಿಕೆಯುಳ್ಳ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅಪರ್ಣಾ, ಇತ್ತೀಚಿಗಷ್ಟೇ ಕ್ಯಾನ್ಸರ್‌ಗೆ ತುತ್ತಾಗಿದ್ದರು.
ಇಂದು ಬನಶಂಕರಿ ಎರಡನೇ ಹಂತದ ತನ್ನ ನಿವಾಸದಲ್ಲಿ ಅನಾರೋಗ್ಯದಿಂದಲೇ ಇಹಲೋಕ ತ್ಯಜಿಸಿದ ಅಪರ್ಣಾ ಅಗಲುವಿಕೆ, ಕನ್ನಡ ಚಿತ್ರರಂಗವನ್ನು ಬಡವಾಗಿಸಿದೆ.
ತನ್ನ 57 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಅಪರ್ಣಾ, ಕನ್ನಡದ ಬಹುಬೇಡಿಕೆಯ ಕಂಠವಾಗಿದ್ದರು.
ಒಬ್ಬ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡು, ನಮ್ಮ ಮೆಟ್ರೋ ಸೇರಿದಂತೆ ಬಹುತೇಕ ಅಧಿಕೃತ ಧ್ವನಿಮುದ್ರಿಕೆಗಳಿಗೆ, ಹಾಗೂ ಕಾರ್ಯಕ್ರಮಗಳು ಮತ್ತು ಪ್ರಚಾರಕಾರ್ಯಗಳಿಗೆ ಕಂಠದಾನ ಮಾಡಿ, ಸುಸ್ಪಷ್ಟ ಉಚ್ಛಾರದೊಂದಿಗೆ ಎಲ್ಲರಿಗೂ ಅಪರ್ಣಾ ಪ್ರಿಯರಾಗಿದ್ದರು.
ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಎನ್ನುವ ಪಾತ್ರದೊಂದಿಗೆ, ವಿವಿಧ ರೀತಿಯಲ್ಲಿ ಜನರನ್ನು ನಗಿಸುತ್ತಿದ್ದ ಅಪರ್ಣಾ, ಬಹುತೇಕ ಕೆಲವರ ಪಾಲಿಗೆ ವರಲಕ್ಷ್ಮಿ ಎನ್ನುವ ಹೆಸರಿನಿಂದಲೇ ಪ್ರೀತಿಪಾತ್ರರಾಗಿದ್ದವರು.
ಖ್ಯಾತ ಬರಹಗಾರ ನಾಗರಾಜ್ ವಸ್ತಾರೆ ಅವರನ್ನು ವಿವಾಹವಾಗಿದ್ದ ಅಪರ್ಣಾ, ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇತ್ತೀಚೆಗೆ ನಟನೆ ಹಾಗೂ ಕಂಠದಾನಗಳಿಂದ ವಿರಾಮ ಪಡೆದುಕೊಂಡಿದ್ದ ಅಪರ್ಣಾ, ಇಂದು ಅನಿರೀಕ್ಷಿತವಾಗಿ, ಅಕಾಲಿಕ ಮರಣ ಹೊಂದಿರುವುದು ಕನ್ನಡಿಗರಿಗೆ ಅತೀವ ದುಃಖ ತರಿಸಿದೆ.
ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.
ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ… pic.twitter.com/VKcta8xr9z
— CM of Karnataka (@CMofKarnataka) July 11, 2024
ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಹಾಗೂ ಅವರ ನಟನಾ ಕೌಶಲ್ಯ ಹಾಗೂ ಸ್ಪಷ್ಟ ಕನ್ನಡದ ನೆನಪು ಸದಾ ಅಜರಾಮರವಾಗಿರಲಿ ಎಂದು ಪ್ರಾರ್ಥಿಸೋಣ.