ಮೇ 20 ರಿಂದ ಚಿತ್ರಮಂದಿರಗಳಲ್ಲಿ “ಕಂಡ್ಹಿಡಿ ನೋಡನ”
ಶಶಿಕುಮಾರ್, ದಿವ್ಯಚಂದ್ರಧರ, ಯೋಗೇಶ್ ಕೆ ಗೌಡ ನಿರ್ಮಾಣದ, ಎಸ್ ಕೆ ನಾಗೇಂದ್ರ ಅರಸ್ ನಿರ್ದೇಶನದ ಮತ್ತು ಪ್ರಣವ ಸೂರ್ಯ ಅಭಿನಯದ
“ಕಂಡ್ಡಿಡಿ ನೋಡನ” ಚಿತ್ರ ಮೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ನಿರ್ಮಾಪಕರಾದ ಕೆ.ಮಂಜು, ರಮೇಶ್ ರೆಡ್ಡಿ ಹಾಗೂ ಸೋಗೂರು ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಮ್ಮ ಸಿನಿಮಾ ಬಗ್ಗೆ ನಾವೇ ಜಾಸ್ತಿ ಹೇಳಿಕೊಳ್ಳುವುದು ಸೂಕ್ತವಲ್ಲ. ಜನ ಹೇಳಬೇಕು. ಟ್ರೇಲರ್ ಗೆ ಸಿಗುತ್ತಿರುವ ಪ್ರಶಂಸೆಗೆ ಮನ ತುಂಬಿ ಬಂದಿದೆ. ನಿರ್ದೇಶನಕ್ಕೆ ಅವಕಾಶ ಕೊಟ್ಟ ನಿರ್ಮಾಪಕರಿಗೆ, ಪ್ರಣವ್ ಸೂರ್ಯ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ನಾಗೇಂದ್ರ ಅರಸ್
ನಾನು ನಟನಾಗಬೇಕೆಂದು ಆಸೆ ಹೊತ್ತು ಬಂದವನಲ್ಲ. ಉತ್ತಮ ತಂತ್ರಜ್ಞನಾಗಬೇಕೆಂಬುದೆ ನನ್ನ ಹಂಬಲ. ಅನಿರೀಕ್ಷಿತವಾಗಿ “ಸೈಕೋ ಶಂಕರ” ಚಿತ್ರದ ಮೂಲಕ ನಾಯಕನಾದೆ. ಇದು ನನ್ನ ಎರಡನೇ ಸಿನಿಮಾ. ಕಥೆ ಚೆನ್ನಾಗಿದೆ. ಇಪ್ಪತ್ತನೇ ತಾರೀಖು ತೆರೆಗೆ ಬರುತ್ತಿದೆ. ನಮ್ಮ ತಂಡವನ್ನು ಹರಸಲು ಬಂದಿರುವ ಅತಿಥಿಗಳಿಗೆ ಧನ್ಯವಾದ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ಪ್ರಣವ್ ಸೂರ್ಯ.
ನನ್ನ ಮೊದಲ ಚಿತ್ರ. ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರವನ್ನು ಬೆಂಬಲಿಸಿ ಎಂದರು ನಾಯಕಿ ಪ್ರಿಯಾಂಕ.
ನನಗೆ ಚಿಕ್ಕ ವಯಸ್ಸಿನಿಂದ ಸಿನಿಮಾ ಮಾಡುವ ಆಸೆ. ಅದು ಈಗ ಕೂಡಿಬಂದಿದೆ. ಸ್ನೇಹಿತೆ ದಿವ್ಯ ಅವರು ಬಂದು ಈ ಸಿನಿಮಾ ಬಗ್ಗೆ ಹೇಳಿದಾಗ ಕಥೆ ಮೆಚ್ಚುಗೆಯಾಗಿ ನಿರ್ಮಾಣಕ್ಕೆ ಮುಂದಾದೆ ಎನ್ನುತ್ತಾರೆ ನಿರ್ಮಾಪಕ ಶಶಿಕುಮಾರ್.
ನಾನು ಮೂಲತಃ ವಿಜ್ಞಾನಿ. ಕಥೆ ಇಷ್ಟವಾಯಿತು. ಸಿನಿಮಾ ಮಾಡಿದ್ದೀವಿ ದಯವಿಟ್ಟು ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕಿ ದಿವ್ಯ ಚಂದ್ರಧರ್. ಮತ್ತೊಬ್ಬ ನಿರ್ಮಾಪಕ ಯೋಗೇಶ್ ಸಹ ಚಿತ್ರಕ್ಕೆ ಎಲ್ಲರ ಬೆಂಬಲ ಕೋರಿದರು.
ಈ ಚಿತ್ರದಲ್ಲಿ ತಾಯಿ-ಮಗನ ಬಾಂಧವ್ಯದ ಸನ್ನಿವೇಶಗಳು ಸೊಗಸಾಗಿದೆ. ನಾನು ನಾಯಕನ ತಾಯಿಯಾಗಿ ಕಾಣಿಸಿಕೊಂಡಿದ್ದೀನಿ ಎಂದರು ನಟಿ ಗಿರಿಜಾ ಲೋಕೇಶ್.
ಸಂಗೀತ ನಿರ್ದೇಶಕ ಶ್ರೀಧರ್ ಕಶ್ಯಪ್ ಸಂಗೀತದ ಕುರಿತು, ವಿಶ್ವ ಸಂಕಲನದ ಬಗ್ಗೆ ಮಾತನಾಡಿದರು.
ಚಿತ್ರದಲ್ಲಿ ಮಂತ್ರಿಯಾಗಿ ಕಾಣಿಸಿಕೊಂಡಿರುವ ಮಂಜುರಾಜ್ ಸೂರ್ಯ, ಗಗನ, ಆದರ್ಶ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.