ಭಟ್ರೆನ ಮಗಲ್ ಖಂಡಿತವಾಗಿಯೂ ನೋಡಬಹುದು

Published on

644 Views

ಬಹಳ ಖುಷಿಯಾಗುತ್ತಿದೆ. ಏಕೆಂದರೆ, ತುಳು ಚಿತ್ರರಂಗ ಬೆಳೆಯುತ್ತಿದೆ. ಜೊತೆಗೆ ನೋವೂ ಅಗುತ್ತಿದೆ. ಏಕೆಂದರೆ, ಸಾಲು ಸಾಲು ತುಳು ಚಿತ್ರಗಳ ಸೋಲು, ‌ಅದಕ್ಕೆ.
ಯಾಕೆ ಈ ಸೋಲು ಎಂದು ಗಮನಿಸಿದರೆ, ತುಳು ಚಿತ್ರರಂಗದಲ್ಲಿ ಕಾಡುತ್ತಿರುವ ಏಕತಾನತೆ. ಇಂದಿನ ಹೆಚ್ಚು ತುಳು ಚಿತ್ರಗಳಲ್ಲಿ ಬೈಗುಳ ಸೂಚನಾರ್ಥದ ಟೈಟಲ್‌ಗಳು. ., ಮನಸ್ಸಿಗೆ ಕಿರಿಕಿರಿ ಎನಿಸುವ ಪಕ್ಕಾ ಲೋಕಲ್ ಹಾಸ್ಯಗಳು. ದ್ವಂದ್ವಾರ್ಥದ ಸಂಭಾಷಣೆಗಳು. ಇವುಗಳು ಆ ಕ್ಷಣಕ್ಕೆ ನಗೆ ಉಕ್ಕಿಸಿದರೂ ಮನಸ್ಸಿನಲ್ಲಿ ಹೆಚ್ಚು ಹೊತ್ತು ನಿಲ್ಲೋದಿಲ್ಲ.

ಇವುಗಳಿಗೆ ಅಪವಾದ ಎಂಬಂತೆ ಇತ್ತೀಚೆಗೆ ಬಿಡುಗಡೆಯಾದ ಶರತ್ ಪೂಜಾರಿಯವರ ನಿರ್ದೇಶನದ *ಕಂಬಳ ಬೆಟ್ಟು ಭಟ್ರೆನ ಮಗಲ್* ಎಲ್ಲಾರು ಸಂಸಾರ ಸಮೇತವಾಗಿ ನೋಡುತ್ತಾ, ಅನುಭವಿಸಬಹುದಾದ ವಿಭಿನ್ನವಾದ, ಆಕರ್ಷಣೀಯ ಶೀರ್ಷಿಕೆ ಹೊಂದಿರುವ ನಾಯಕಿ ಪ್ರಧಾನ ತುಳು ಚಲನಚಿತ್ರ.

ಹಚ್ಚ ಹಸುರಿನ ದೃಶ್ಯಗಳು, ಬೆಟ್ಟ – ಗುಡ್ಡಗಳು ನೋಡಿದಾಗ, ಇವು ನಿಜವಾಗಿಯೂ ನಮ್ಮ ತುಳುನಾಡೆ? ಎಂದೆನಿಸುತ್ತದೆ. ನಮ್ಮೂರಿನ ಕೆಂಪುಕಲ್ಲಿನ ಪಾಯವನ್ನು ಕೂಡಾ ಇಷ್ಟು ಚೆನ್ನಾಗಿ ಚಿತ್ರಿಸಬಹುದೆಂಬ ಕಲ್ಪನೆ ಬಂದದ್ದು ಈ ಚಿತ್ರವನ್ನು ನೋಡಿದ ಮೇಲೆಯೇ. ಈ ನಿಟ್ಟಿನಲ್ಲಿ ಛಾಯಾಗ್ರಾಹಕ ಅಭಿನಂದನಾರ್ಹರು.
ಇನ್ನು ಇಲ್ಲಿ ಹೇಳಲೇ ಬೇಕಾದ ವಿಚಾರವೆಂದರೆ, ಚಿತ್ರದ ನಾಯಕಿ ಮತ್ತು ಕಳಾರಿ ಫೈಟ್. ಈ ಚಿತ್ರದಲ್ಲಿ ನಾಯಕಿ ಸಿನಿಮಾದ ನಾಯಕಿ ಎಂದೆಣಿಸುವುದೇ ಇಲ್ಲ. ಇವಳು ಸಿನಿಮಾದ ಪ್ರತೀ ಫ್ರೇಮ್ ನಲ್ಲೂ ನಮ್ಮ ಮನೆ ಮಗಳೋ ಅಥವಾ ಅಕ್ಕ ಪಕ್ಕದ ಮನೆ ಮಗಳೋ ಎಂದೆಣಿಸುವಷ್ಟು ಅಪ್ಯಾಯಮಾನವಾಗುತ್ತಾಳೆ.
ಇಡೀ ಚಲನಚಿತ್ರದ ಉದ್ದಕ್ಕೂ ಇವಳು ಆತ್ಮ ವಿಶ್ವಾಸದ ಪ್ರತಿ ರೂಪವಾಗಿ ಕಾಣುತ್ತಾಳೆ. ಅದು ಎಷ್ಟೆಂದರೆ, ಕಿಡ್ನ್ಯಾಪ್ ಮಾಡಿ ಬಂಧಿಸಿದಾಗಲೂ ಅವಳಲ್ಲಿ ಹಿಂಜರಿಕೆ ಕಾಣೋದೇ ಇಲ್ಲ. ಅಂತಹ ಅದ್ಭುತ ಆತ್ಮವಿಶ್ವಾಸ ಮತ್ತು ಆತ್ಮ ಸ್ಥೈರ್ಯ ಆ ಪಾತ್ರಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ, ಅವಳು ಕಲಿತ *ಕಳಾರಿ ಫೈಟ್* .

ಒಂದೆಡೆ ರೌಡಿ ಗ್ಯಾಂಗ್ ಅವಳನ್ನು ಸುತ್ತುವರಿದಾಗ ಅವಳ ಸಹಾಯಕ್ಕೆ ಬರುವುದು ಅವಳ ಮೂವರು ಬಾಡಿಗಾರ್ಡ್ ನಂತಿರುವ ಸ್ನೇಹಿತರು. “ಓಹ್, ಹಳೇ ಮದ್ಯ, ಹೊಸ ಬಾಟಲ್” ಎಂದು ಕೊಳ್ಳುವಷ್ಠರಲ್ಲಿ “ಚಕ್” ಎಂದು ದೃಶ್ಯ ಬದಲಾಗಿ, ನಿರ್ದೇಶಕರ ಧನಾತ್ಮಕ ಚಿಂತನೆ ಸಾಕಾರಗೊಳ್ಳುತ್ತದೆ. ಈ ಸಂಧರ್ಭದಲ್ಲಿ ನನಗೆ ಸಿನ್ಸಿಯರಾಗಿ ಅನಿಸಿದ್ದು, ಈ ಚಲನ ಚಿತ್ರವನ್ನು ನಮ್ಮ ನಾಡಿನ ಹೆಣ್ಣು ಮಕ್ಕಳು, ಪಾಲಕರು ಮತ್ತು ಪ್ರತಿಯೊಬ್ಬರೂ ನೋಡುವ ಅವಶ್ಯಕತೆ ಇದೆ ಎಂದು.
ನಮ್ಮ ಹೆಣ್ಣು ಮಕ್ಕಳ ರಕ್ಷಣೆಗೆ ಗಂಡು ಮಕ್ಕಳ ಅಗತ್ಯ ಮತ್ತು “ಅಜಿಪ ವರ್ಷದ ಪರಬುಗು ಆಜಿ ವರ್ಷದ ಆಣ್ ತಮೆರಿ” ಎಂಬ ತುಳು ಗಾದೆ ಮಾತನ್ನು ತೆಗೆದು ಬೀಸಾಡಿ, ಹೆಣ್ಣಿಗೆ ಆತ್ಮ ವಿಶ್ವಾಸ ಮತ್ತು ಧೈರ್ಯ ನೀಡಿದರೆ, ಅವರ ರಕ್ಷಣೆ ಅವರೇ ಮಾಡುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಾರೆ ನಿರ್ದೇಶಕರು.

ಇನ್ನು ಅಭಿನಯದ ವಿಚಾರಕ್ಕೆ ಬಂದರೆ, ಭಟ್ಟರದ್ದು ತಂದೆಯಾಗಿ, ಊರಿನ ಮಾರ್ಗದರ್ಶಕರಾಗಿ , ಮಗಳು ಕಾಣೆಯಾದಾಗ್ಯೂ, ಆರೋಪಿಗಳಿಗೆ ಜಾಮೀನು ನೀಡುವ ಜವಾಬ್ದಾರಿಯುತ, ಆ ಊರಿನ ಅಯ್ಯನಾಗಿ ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಅದೇ ಸನ್ನಿವೇಶದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿದ ರಮೇಶ್ ರೈ ಕುಕ್ಕುವಳ್ಳಿ ಒಂದೇ ಒಂದು ಡೈಲಾಗ್ ಇಲ್ಲದೆ , ಸನ್ನಿವೇಶ ಮತ್ತು ಅವರ ಪಾತ್ರದ ಒಳ ಹೊರಗನ್ನು ಅಭಿವ್ಯಕ್ತ ಗೊಳಿಸಿದ್ದು, ಅವರೊಳಗಿರುವ ಅದ್ಭುತ ನಟನ ಅನಾವರಣ ಗೊಳಿಸುತ್ತದೆ. ಹೆಣ್ಣು ಮಗಳ ತಂದೆ ಮತ್ತು ಶಾಲಾ ಶಿಕ್ಷಕರಾಗಿ
ಇನ್ನೋರ್ವ ಹಿರಿಯ ನಟ ಶಿವಪ್ರಕಾಶ ಪೂಂಜಾರವರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ದೀಪದ ಅಡಿಯಲ್ಲಿ ಕತ್ತಲೆ ಎಂಬಂತೆ, ಸಾತ್ವಿಕ ಭಟ್ಟರ ಜೊತೆಯಲ್ಲಿ ಇದ್ದೇ ಕನ್ನಿಂಗ್ ಪಾತ್ರದಲ್ಲಿ ಚಿದಾನಂದ ಅದ್ಯಪಾಡಿ ಚಿತ್ರದುದ್ದಕ್ಕೂ ಕುತೂಹಲ ಕೆರಳಿಸುತ್ತಾರೆ.
ಮಧ್ದೆ ಮಧ್ಯೆ ಕಥೆ ಕೇಳುತ್ತಾ ಬರುವ ಪ್ರಕಾಶ್ ತುಮಿನಾಡು ಗಂಭೀರ ಸನ್ನಿವೇಶವನ್ನು ತಿಳಿಗೊಳಿಸುತ್ತಾರೆ.
ಎಂ.ಎಲ್. ಎ ಎಲ್ಲಾ ಸಂದರ್ಭಗಳಲ್ಲಿ ಭಟ್ಟರ ಮನೆಯಲ್ಲೇ ಕಾಣಸಿಗುವುದು ಅಭಾಸವೆನಿಸಿದರೂ, ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ.
ಭಟ್ಟರ ಮಗಳ ಬಾಡಿಗಾರ್ಡ್ ಗಳಂತಿರುವ ಮೂವರು ಯುವಕರು ಮತ್ತು ಭಟ್ಟರ ಮಗಳ ಸ್ನೇಹ ಮಡಿವಂತಿಕೆಯನ್ನು ಮೀರಿ ಹೊಸ ಚಿಂತನೆಗೆ ನಾಂದಿಯಾಗುತ್ತದೆ. ಜೊತೆಗೆ ಸಿನಿಮಾ ಇನ್ನೊಂದೆಡೆ ಸಾಮಾಜಿಕ ವಿಶ್ಲೇಷಣೆ ಮಾಡುತ್ತಾ, “ರೂಢಿಗತ ಚಿಂತನೆ (Stereo type thinking) ಯನ್ನು ಅಲುಗಾಡಿಸುತ್ತದೆ.
ಬಹುತೇಕ ನಟಿಸಿದ ಹೊಸಬರು ಅವರವರ ಪಾತ್ರವನ್ನು ಅವರ ಪರಧಿಯೊಳಗೆ ಚೆನ್ನಾಗಿ ಅಭಿನಯಿಸಿ, ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಾರೆ.

ಸಂಗೀತ ಈ ಚಿತ್ರದ ಇನ್ನೊಂದು ಧನಾತ್ಮಕ ಅಂಶ.

ಹಾಗೆಂದು ಇಡೀ ಚಲನಚಿತ್ರದಲ್ಲಿ ಕೊರತೆಗಳೇ ಇಲ್ಲವೆಂದಲ್ಲ. ಚಿಕ್ಕ ಪುಟ್ಟ ಕೊರತೆ ಕಂಡುಬಂದರೂ ಅದು ದೊಡ್ಡ ಸಂಗತಿ ಆಗೋದಿಲ್ಲ. ಪ್ರಾರಂಭದಲ್ಲಿ ಬಹಳ ಜಾಳು ಜಾಳಾಗಿ ಸಾಗುವ ಸಿನಿಮಾ ನಂತರದಲ್ಲಿ ಬಿಗಿತನವನ್ನು ಕಾಯ್ದುಕೊಳ್ಳುತ್ತದೆ. ಶಾಂತಿ ತುಂಬಿದ ಕಂಬಳಬೆಟ್ಟುವಿನಲ್ಲಿ ಅಶಾಂತಿಯ ಬೀಜ ಬಿತ್ತುವ ಶಕುನಿಯಂತವರು, ಇದ್ದುದನ್ನು ಇದ್ದ ಹಾಗೇ ಸ್ವೀಕರಿಸಿ ಲೈಫ್ ಅನ್ನು ಎಂಜಾಯ್ ಮಾಡುವ ಹುಡುಗರು, ಸ್ನೇಹಿತನಿಗಾಗಿ ಹಂಬಲಿಸುವ ಮುಗ್ದ ಮಸ್ಸಿನ ಸ್ನೇಹಿತೆ, ಮುಗ್ದತೆಯ ಮೂಕ, ಮಗಳಿಗಾಗಿ ಹಂಬಲಿಸುವ ತಂದೆ, ಮಗನಿಗಾಗಿ ಹಂಬಲಿಸು ತಾಯಿ, ತಾಯಿಗಾಗಿ ಹಂಬಲಿಸುವ ಮಗ, ಜೀವಕ್ಕೆ ಜೀವ ನೀಡುವ ಸ್ನೇಹಿತರು, ಊರಿನ ಬಂಧುಗಳಿಗೆ ತೊಂದರೆಯಾದಾಗ ಅವರ ಬೆಂಬಲಕ್ಕೆ ನಿಲ್ಲುವ ವಿರೋಧಿ ಬಣ, ಸ್ನೇಹಿತರು, ಹಿತೈಷಿಗಳು ಅನ್ನುತ್ತಲೇ ಬೆನ್ನಿಗೆ ಚೂರಿ ಹಾಕುವ ಹಿತಶತ್ರುಗಳು… ಹೀಗೆ ಸಿನಿಮಾದುದ್ದಕ್ಕೂ ಬರುವ ಪಾತ್ರಗಳು ಕೆಲವೊಂದು ಸಾರಿ ಸಿನಿಮೀಯವಾಗಿ ಕಾಣದೆ, ನಮ್ಮ ಸುತ್ತಮುತ್ತಲಿನ ಪಾತ್ರಗಳಾಗಿ ಬಿಡುತ್ತವೆ. ಮತ್ತು ಕೆಲವು ಸಂದರ್ಭದಲ್ಲಿ ಪ್ರೇಕ್ಷಕನೇ ಪಾತ್ರವಾಗುತ್ತಾನೆ. ಇದು ಈ ಚಿತ್ರದ ಹೈಲೈಟ್.

ಹಿರಿಯ ಕಲಾವಿದರಾದ ಭೋಜ ರಾಜ ವಾಮಂಜೂರು, ಅರವಿಂದ್ ಬೋಳೂರು, ಸತೀಶ್ ಬಂದಲೆಯಂತಹ ಅಧ್ಭುತ ಹಾಸ್ಯ ಕಲಾವಿದರನ್ನು ಹೆಸರಿಗಾಗಿ ತುರುಕಿಸಿದಂತೆ ಕಂಡುಬರುತ್ತದೆ.
ತುಳು ಸಿನಿಮಾ ಎಂದರೆ, ಮೊದಲಿನಿಂದ ಕೊನೆಯವರೆಗೂ ಹಾಸ್ಯ ಇರಲೇ ಬೇಕು, ಇಲ್ಲದಿದ್ದಲ್ಲಿ ಸಿನಿಮಾ ಓಡಲ್ಲ ಎನ್ನುವ ನಾವೇ ಸೃಷ್ಟಿಸಿದ ವ್ಯಾಖ್ಯಾನಕ್ಕೆ ಭಟ್ರೆನ ಮಗಲ್ ನ ಮೂಲಕ ತೆರೆ ಬಿದ್ದಿದೆ. ಕಥೆ, ನಿರ್ದೇಶನ ಗಟ್ಟಿ ಇದ್ದರೆ, ಗಂಭೀರ ಸಿನಿಮಾ ಕೂಡಾ ಪ್ರೇಕ್ಷಕರನ್ನು ತಲುಪಲು ಸಾಧ್ಯ ಎಂದು ಈ ಚಲನಚಿತ್ರ ತೋರಿಸಿಕೊಟ್ಟಿದೆ.

ಕಾಮಿಡಿ ಸಿನಿಮಾ ಯುಗದಲ್ಲೂ ಇಂತಹ ಸಿನಿಮಾಕ್ಕೆ ಬಂಡವಾಳ ಹಾಕಲು ಮುಂದೆ ಬಂದ ನಿರ್ಮಾಪಕರು ಅಭಿನಂದನಾರ್ಹರು.
ಕೊನೆಯದಾಗಿ, ನಾಯಕಿಯ ಆತ್ಮವಿಶ್ವಾಸದ ಪ್ರತೀಕವಾಗಿರುವ ಕಳಾರಿಫೈಟ್ ನೋಡಲಾದರೂ ಯುವಜನತೆ ಈ ಚಲನಚಿತ್ರವನ್ನು ನೋಡುವುದು ಒಳಿತು. ಇಲ್ಲವಾದಲ್ಲಿ ಅನೇಕ ಧನಾತ್ಮಕ ಅಂಶಗಳಿರುವ ಸದಭಿರುಚಿಯ, ಮನೆ ಮಂದಿ ಒಟ್ಟಿಗೆ ಕೂತು ನೋಡಬಹುದಾದ ಚಲನಚಿತ್ರ ವೀಕ್ಷಣೆಯಿಂದ ವಂಚಿತರಾಗಬಹುದು.

ಬರಹ: ಭರತ್ ಎಸ್ ಕರ್ಕೇರ

Copyright ©2024 . All Rights Reserved. privacy | terms Whatsapp: 9538193653 Email: hello@flixoye.com