ಜೀ ನಲ್ಲಿ ಹಳ್ಳಿಯಲ್ಲಿ ಅರಳಿದ ‘‘ಕಮಲಿ’’
ಜೀ ನಲ್ಲಿ ಹಳ್ಳಿಯಲ್ಲಿ ಅರಳಿದ ‘‘ಕಮಲಿ’’(kamali new serial in zee kannada)
ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಶೈಲಿಯ ಧಾರವಾಹಿಗಳನ್ನು ನೀಡುವ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆಯಲು ಪರದಾಡುವ ಪರಿಸ್ಥಿತಿಯನ್ನು ಎಳೆಎಳೆಯಾಗಿ ಕಮಲಿ ಎಂಬ ಧಾರವಾಹಿಯ ಮೂಲಕ ಹೇಳಹೊರಟಿದೆ. ಇದೇ ತಿಂಗಳ 28 ರಿಂದ sಸಂಜೆ 7 ಗಂಟೆಗೆ ಕಮಲಿ ಪ್ರಸಾರವಾಗಲಿದೆ.
ತಮಿಳುನಾಡಿನ ಕೊಡೆಕೆನಾಲ್ ನಲ್ಲಿ ಚಿತ್ರೀಕರಣಗೊಂಡಿರುವ ಮೊದಲ ಧಾರವಾಹಿ ಇದಾಗಿದೆ. ಚಲನಚಿತ್ರ ನಿರ್ದೇಶಕ ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಧಾರವಾಹಿಯಲ್ಲಿ ನಾಯಕಿ ಕಮಲಿ ತನ್ನ ವಿರೋಧದ ನಡುವೆಯೂ ಹೇಗೆ ಪಟ್ಟಣಕ್ಕೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾಳೆ ಎಂದು ಹೇಳಲಾಗಿದೆ. ವಾಸ್ಕೋಡಿಗಾಮ ಮಾಸ್ಟರ್ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಬಿ.ಎಸ್. ನಿರಂಜನ್ ಈ ಧಾರವಾಹಿಯಲ್ಲಿ ರಿಷಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಗಾಂಧಾರಿ ಧಾರವಾಹಿಯಲ್ಲಿ ಕೂಡ ನಿರಂಜನ್ ಬಣ್ಣ ಹಚ್ಚಿದ್ದರು. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಕಮಲಿ ಅಲ್ಲಿ ಅನುಭವಿಸುವ ನೋವು – ನಲಿವಿನ ಚಿತ್ರಣ ಈ ಧಾರವಾಹಿಯಲ್ಲಿದೆ. ಪುನರ್ ವಿವಾಹ ಧಾರವಾಹಿಯ ಸ್ವಾತಿ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಅಮೂಲ್ಯ ಇದರಲ್ಲಿ ಕಮಲಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ನಗರದ ಜೀವನದ ಬದುಕನ್ನು ತೆರೆದಿಡಲಾಗಿದೆ. ಮಾರಾಪುರ ಎಂಬ ಕಾಲ್ಪನಿಕ ಹಳ್ಳಿಯ ಹಿನ್ನೆಲೆಯಲ್ಲಿ ಕಮಲಿಯ ಕಥಾಹಂದರ ತೆರೆದುಕೊಳ್ಳಲಿದೆ. ಪಟ್ಟಣದಲ್ಲಿ ತೆರೆದುಕೊಳ್ಳಲಿರುವ 17 ವರ್ಷಗಳ ಹಿಂದಿನ ರಹಸ್ಯವೇನು? ಕಮಲಿ, ರಿಷಿ ಇಬ್ಬರ ಬದುಕಿನಲ್ಲಿ ಏನೆಲ್ಲಾ ತಿರುವುಗಳು ನಡೆಯಲಿವೆ ಎಂದು ಕಮಲಿಯಲ್ಲಿ ಹೇಳಲಾಗಿದೆ. ಪದ್ಮಾವಾಸಂತಿ, ಯಮುನಾ ಶ್ರೀನಿಧಿ ಸೇರಿದಂತೆ, ಹಲವಾರು ಕಲಾವಿದರು ಈ ಧಾರವಾಹಿಯಲ್ಲಿ ನಟಿಸಿದ್ದಾರೆ.