ಆಗಸ್ಟ್ 6 ರಂದು ತೆರೆಗೆ ಬರುತ್ತಿದ್ದಾನೆ ಕಲಿವೀರ…
ಇದೇ ಆಗಸ್ಟ್ 6 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಚಿತ್ರ ಕಲಿವೀರ. ಕೊರೋನಾ ಎರಡನೇ ಅಲೆಯ ಲಾಕ್‌ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಇದು. ರಾಣೇಬೆನ್ನೂರಿನ ಪ್ರತಿಭೆ ಏಕಲವ್ಯ ಮೊದಲ ಬಾರಿಗೆ ನಾಯಕನಾಗಿ ಕಲಿವೀರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಉತ್ತರ ಕರ್ನಾಟಕ ಮಂದಿಯಿಂದಲೇ ಸಿದ್ಧವಾಗಿದ್ದು, ಉತ್ತರ ಕರ್ನಾಟಕದ ಸ್ಪೆಶಲ್ ಸಿನಿಮಾ ಎನ್ನಬಹುದು. ಕಲಿವೀರ ಸಿನಿಮಾ ಬಗ್ಗೆ ಹೇಳುವುದಾದರೆ, ನಾಯಕ ಕಲಿ ಆದಿವಾಸಿ ಜನಾಂಗದವ. ತನ್ನ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ಸಿಡಿದೆದ್ದು, ದ್ವೇಷ ತೀರಿಸಿಕೊಳ್ಳುವ ರೋಚಕ ಕಥಾ ಹಂದರ ಹೊಂದಿದೆ. ಭಾರತದ ಮೇಲೆ ಶತಮಾನಗಳ ಕಾಲ ನಿರಂತರವಾಗಿ ದೌರ್ಜನ್ಯ, ದಾಳಿ ಮಾಡಿದ ರಾಷ್ಟ್ರೀಯ ಅಂತರಾಷ್ಟ್ರೀಯ ಕುಖ್ಯಾತಿಯ ಈ ಸಮಾಜದ ದುಷ್ಟ ಶಕ್ತಿಗಳನ್ನು ಮೆಟ್ಟಿನಿಂತು ಆದಿವಾಸಿ ಕಲಿ ವೀರಾವೇಶದಿಂದ ಹೋರಾಡಿ ಅವರನ್ನು ಹೇಗೆ ಮಟ್ಟ ಹಾಕಿ ಕಲಿವೀರನಾಗುತ್ತಾನೆ ಎಂಬುದು ಕಲಿವೀರ ಚಿತ್ರದಲ್ಲಿ ತೋರಿಸಿದ್ದಾರೆ ನಿರ್ದೇಶಕ ಅವಿರಾಮ್.
ನಿರ್ದೇಶಕ ಅವಿರಾಮ್ ಈ ಹಿಂದೆ ‘ಕನ್ನಡ ದೇಶದೊಳ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಪಕ್ಕಾ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾವಾಗಿರುವ ಕಲಿವೀರ ಚಿತ್ರದ ಮೆಕಿಂಗ್ ವಿಚಾರದಲ್ಲಿ ಎಲ್ಲೂ ಕಾಂಪ್ರಮೈಸ್ ಆಗಲಿಲ್ಲ ಚಿತ್ರತಂಡ. ಕಲಿವೀರ ಚಿತ್ರ ಕನ್ನಡ, ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಅನಾಥನಾಗಿರುವ ಏಕಲವ್ಯ ರಾಣೇಬೆನ್ನೂರಿನಿಂದ ಕನಸುಗಳನ್ನು ಹೊತ್ತು ಗಾಂಧಿನಗರಕ್ಕೆ ಬಂದು ಕಲಿವೀರ ಚಿತ್ರದ ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.. ಏಕಲವ್ಯ ರಾಣೇಬೆನ್ನೂರನಲ್ಲಿ ಆಟೋ ಓಡಿಸುತ್ತಾ ಯೋಗಾದಲ್ಲಿ ಗೋಲ್ಡ್ ವಿನ್ನರ್ ಆಗಿರುವ ಏಕಲವ್ಯ ನೀನಾಸಂ ಹಾಗೂ ರಂಗಾಯಣದಲ್ಲಿ ನಟನೆ ಕಲಿತಿದ್ದಾರೆ. ಅಲ್ಲದೆ ಕರಾಟೆ, ಕತ್ತಿ ವರಸೆ, ಕಳರಿ ವಿದ್ಯೆಗಳನ್ನು ತಿಳಿದಿದ್ದು, ಏಕಲವ್ಯನ ಈ ಎಲ್ಲಾ ವಿದ್ಯೆಗಳನ್ನು ನಿರ್ದೇಶಕರು ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ.
ಚಿತ್ರದಲ್ಲಿ ಏಕಲವ್ಯಗೆ ನಾಯಕಿಯರಾಗಿ ಚಿರಶ್ರೀ ಅಂಚನ್ ಹಾಗೂ ಪಾವನ ಗೌಡ ಕಾಣಿಸಿಕೊಂಡಿದ್ದಾರೆ. ಜ್ಯೋತಿ ಆರ್ಟ್ಸ್ ನಿರ್ಮಾಣವಿರುವ ಈ ಚಿತ್ರದ ತಾರಾಗಣದಲ್ಲಿ ಟಿ.ಎಸ್. ನಾಗಾಭರಣ, ನೀನಾಸಂ ಅಶ್ವತ್, ರಾಕ್ಲೈನ್ ಸುಧಾಕರ್, ರಮೇಶ್ ಪಂಡಿತ್ ಮುಂತಾದವರಿದ್ದಾರೆ. ಚಿತ್ರದ ಹಾಡುಗಳಿಗೆ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದು, ರಾಘವೇಂದ್ರ ಹಿನ್ನೆಲೆ ಸಂಗೀತ ಮಾಡಿದ್ದಾರೆ. ಉಳಿದಂತೆ ಹಾಲೇಶ್ ಎಸ್. ಛಾಯಾಗ್ರಹಣ, ಎ.ಆರ್. ಕೃಷ್ಣ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸವಿದೆ.