50 ಸಂಚಿಕೆ ಪೂರೈಸಿದ ಕಾದಂಬರಿ ಮತ್ತು ನಿನ್ನಿಂದಲೇ
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಾದಂಬರಿ ಮತ್ತು ನಿನ್ನಿಂದಲೇ ಧಾರಾವಾಹಿ ಈಗ 50 ಸಂಚಿಕೆಯನ್ನು ಪೂರೈಸಿದ ಸಂಭ್ರಮದಲ್ಲಿವೆ.
ಉದಯ ಟಿವಿಯಲ್ಲಿ ಹೆಸರು ಮಾಡಿದ್ದ ಧಾರಾವಾಹಿ ಕಾದಂಬರಿ. ಅದೇ ಹೆಸರಿನಲ್ಲಿ ಮತ್ತೆ ಮಧ್ಯಾಹ್ನ 2ಕ್ಕೆ ಪ್ರಾರಂಭವಾಗಿ ಹಳೆ ಕಾದಂಬರಿಯಷ್ಟೆ ಪ್ರೇಕ್ಷಕರಿಂದ ಪ್ರೀತಿ ಮತ್ತು ಪ್ರೋತ್ಸಾಹವನ್ನು ಪಡೆದುಕೊಂಡಿದೆ.
ತುಂಬು ಸಂಸಾರದ ಆರ್ಥಿಕ ಜವಾಬ್ದಾರಿ ಹೊತ್ತು ಹಗಲಿರುಳು ದುಡಿದು ತನ್ನ ಆಸೆ- ಆಕಾಂಕ್ಷೆಗಳನ್ನು ಬದಿಗೊತ್ತಿ ಮನೆಗೆ ಪ್ರಾಶಸ್ತ್ಯ ಕೊಟ್ಟವಳು ಕಾದಂಬರಿ. ಫ್ಯಾಕ್ಟರಿ ಓನರ್ ಮಗನಾದ ದಿಗಂತ್ ಬಡವನೆಂದು ತಿಳಿದು ಅವನನ್ನು ಅದೇ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಸಿದ್ದು ತಮಾಷೆಯಾದರೆ, ದಿಗಂತ್ ಅವಳ ನಿರ್ಮಲ ಮನಸ್ಸಿಗೆ ಮಾರು ಹೋಗುತ್ತಾನೆ. ಇತ್ತ ಕಾದಂಬರಿ-ದಿಗಂತ್ ನಡುವೆ ಪ್ರೇಮ ಶುರುವಾಗುತ್ತಿದ್ದರೆ ಅತ್ತ ಇವಳ ಹಳೆಯ ಗೆಳೆಯ ಕಮಲ್ ಅಸುಯೆಯಿಂದ ಕಾದಂಬರಿಯನ್ನು ಪಡೆಯಲು ಅವಳಮ್ಮನನ್ನು ಒಪ್ಪಿಸಿಬಿಡುತ್ತಾನೆ. ಕಾದಂಬರಿ ಇಷ್ಟಪಟ್ಟ ದಿಗಂತ್ನನ್ನು ವರರಿಸುತ್ತಾಳಾ? ಅಮ್ಮ ಒಪ್ಪಿದ ಕಮಲ್ನನ್ನು ವರಿಸುತ್ತಾಳಾ? ಎಂಬ ಕೂತುಹಲ ಘಟ್ಟದಲ್ಲಿ ಮುಂದಿನ ಕಥೆ ಸಾಗುತ್ತದೆ.
ಕಾದಂಬರಿಯ ಈ 50ರ ಸಂಚಿಕೆಯನ್ನು ತಂಡ ಸೆಟ್ನಲ್ಲಿ ಸಿಹಿ ಹಂಚಿಕೊಂಡು ಸಂಭ್ರಮದಿಂದ ಆಚರಿಸಿದರು. ಧಾರಾವಾಹಿಯನ್ನು ನಿರ್ಮಿಸಿದ ಶ್ರೀ ದುರ್ಗಾ ಕ್ರಿಯೇಶನ್ಸ್ ಸದಭಿರುಚಿಯ ಧಾರಾವಾಹಿಯನ್ನು ವೀಕ್ಷರಿಗೆ ಕೊಟ್ಟಿರುವ ಬಗೆಗೆ ಸಂತಸವನ್ನು ವ್ಯಕ್ತ ಪಡಿಸಿದರು.
“ಈಗಾಗಲೇ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುತ್ತಿರುವುದು ಮತ್ತು ಹಲವಾರು ರೀತಿಯ ಭಾವನೆಗಳನ್ನು ವ್ಯಕ್ತ ಪಡಿಸುವ ಒಂದು ಚಾಲೆಂಜಿಂಗ್ ಪಾತ್ರ ದೊರಕಿರುವುದು ನನಗೆ ಬಹಳಷ್ಟು ಖುಷಿಯಾಗಿದೆ” ಎಂದು ನಾಯಕ ನಟಿ ಪವಿತ್ರಾ ನಾಯಕ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
“ನಾನು ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದೇನೆ. ಈಗ ನನ್ನನ್ನು ವೀಕ್ಷಕರು ದಿಗಂತ್ ಪಾತ್ರದ ಮೂಲಕ ಗುರುತಿಸಿದಾಗ ನನಗೆ ತುಂಬಾ ಸಂತೋಷವಾಗುತ್ತದೆ” ಎಂದು ನಟ ರಕ್ಷಿತ್ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
ನಿರ್ದೇಶಕ ದರ್ಶಿತ್ ಭಟ್ ಬಲವಳ್ಳಿ ಮಾತನಾಡುತ್ತಾ “ಪ್ರತಿಯೊಂದು ಧಾರಾವಾಹಿಯಲ್ಲಿ ವಿಲನ್ ಪಾತ್ರವನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯುತ್ತಾರೆ ಆದರೆ ಈ ಕಥೆಯಲ್ಲಿ ಪರಿಸ್ಥಿತಿ ಮತ್ತು ಸಂದರ್ಭಗಳೆರಡು ಚಿತ್ರಕಥೆಯಾಗಿದ್ದು ಅದನ್ನು ಯಶಸ್ವಿಯಾಗಿ ತೆರೆಯಮೆಲೆ ತರುವುದರಲ್ಲಿ ಬರಹಗಾರರು, ತಂತ್ರಜ್ಞರು, ನಟರು ಮುಖ್ಯವಾಗಿ ನಿರ್ಮಾಪಕರು ಕಾರಣಕರ್ತರಾಗಿದ್ದಾರೆ. ಅವರ ಪರಿಶ್ರಮ ಮತ್ತು ಪ್ರೇಕ್ಷಕರ ಹಾರೈಕೆ ಈ ಯಶಸ್ವಿಗೆ ಕಾರಣವಾಗಿದೆ ಎಂದರು.
ಉದಯ ಟಿವಿಯಲ್ಲಿ ಉತ್ತಮ ಕಥೆಯೊಂದಿಗೆ ಪ್ರೇಕ್ಷಕರ ಪ್ರೋತ್ಸಾಹದಿಂದ ನಿನ್ನಿಂದಲೇ ಧಾರವಾಹಿಯು ಎಲ್ಲರ ಮನ ಗೆದ್ದು 50 ರ ಸಂಚಿಕೆಯ ಸಂಭ್ರಮದಲ್ಲಿದೆ. ಅತ್ಯುನ್ನತ ತಾರಾಬಳಗವನ್ನು ಹೊಂದಿದ್ದು ನಿರ್ದೇಶಕರಾಗಿ ದಿಲೀಪ್ ಕುಮಾರ್.ಎಸ್ ಹಾಗೂ ನಿರ್ಮಾಪಕರಾಗಿ ರಾಜೇಶ್ ನಟರಂಗ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಯಕಿ ನಾಯಕರಾದ ಅನನ್ಯ ಹಾಗೂ ವರುಣ್ ಮದುವೆಯೂ ಕಥೆಯಲ್ಲಿ ಇನ್ನಷ್ಟು ಟ್ವಿಸ್ಟ್ ನೀಡಿದ್ದು ಅನನ್ಯ ಹೇಗೆ ದೊಡ್ಡಮನೆಯ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದು ಮುಂದಿನ ಕಥಾವಸ್ತುವಾಗಿದೆ. ಧಾರಾವಾಹಿ ದೃಶ್ಯಗಳು ಉತ್ತಮವಾಗಿ ಮೂಡಿಬರುತ್ತಿದ್ದು ಹಳ್ಳಿಯ ಸೊಗಡನ್ನು ಎತ್ತಿಹಿಡಿಯುವಂತಿವೆ. ಅಲ್ಲಲ್ಲಿ ಸೊಸೆಯಂದಿರ ನಡುವಿನ ಸಣ್ಣ ಸಣ್ಣ ಮನಸ್ಥಾಪಗಳು, ಅಜ್ಜಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಹೋರಾಡುವ ಅನನ್ಯಾಳ ಧೈರ್ಯ ಮತ್ತು ಆತ್ಮ ಸ್ಥೈರ್ಯ ಒಂದೆಡೆಯಾದರೆ, ಇರುವ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ಸೆಣಸಾಡುತ್ತಿರುವ ವರುಣ್ ಇನ್ನೊಂದೆಡೆ. ಇವರಿಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಈ ಜೋಡಿಗಳು ಹೇಗೆ ಒಂದಾಗುತ್ತದೆ ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ನೋಡಬಹುದು.
“ನಿನ್ನಿಂದಲೇ ಧಾರಾವಾಹಿಯು ನನ್ನ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿದೆ, ಉದಯ ಟಿವಿಯಲ್ಲಿ ಎರಡನೇ ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದು ಪ್ರೇಕ್ಷಕರು ನನ್ನನ್ನು ಹೆಚ್ಚಾಗಿ ಗುರುತಿಸುತ್ತಿರುವುದು ತುಂಬ ಖುಷಿಯಾಗಿ”ದೆಎಂದು ನಾಯಕಿ ಚಿತ್ರಶ್ರೀ ಹೇಳಿದ್ದಾರೆ“ನಾಯಕನಾಗಿ ನಟಿಸುತ್ತಿರುವ ನನಗೆ ನಿನ್ನಿಂದಲೇ ಧಾರಾವಾಹಿಯಿಂದ ಹೆಚ್ಚಿನ ಜನಮನ್ನಣೆ ಸಿಕ್ಕಿದ್ದು ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ವರುಣ್ಪಾತ್ರ ನನಗೆ ತುಂಬಾ ಮನಮುಟ್ಟಿದೆ” ಎಂದು ನಾಯಕ ದೀಪಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
50 ಸಂಚಿಕೆಗಳನ್ನು ಪೂರೈಸಿದ ಕಾದಂಬರಿ ಸೋಮವಾರದಿಂದ ಶನಿವಾರ ಮಧ್ಯಾಹ್ನ 2ಕ್ಕೆ ಮತ್ತು ನಿನ್ನಿಂದಲೇ ಮಧ್ಯಾಹ್ನ 2.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.