ಉದಯ ಟಿವಿಯಲ್ಲಿ “ಕಾಲೇಜ್ ಕುಮಾರ” ಪ್ರೀಮಿಯರ್ ಶೋ ಇದೇ ಶನಿವಾರ (27.01.2018) ಸಂಜೆ 6ಕ್ಕೆ

Published on

595 Views

ಉದಯ ಟಿವಿ ಇದೇ ಶನಿವಾರ ಸಂಜೆ 6 ಗಂಟೆಗೆ ಸೂಪರ್ ಹಿಟ್ ಚಲನಚಿತ್ರವಾದ “ಕಾಲೇಜ್ ಕುಮಾರ” ಪ್ರದರ್ಶನವಾಗಲಿದೆ.

ನಾಯಕನಾಗಿ ವಿಕ್ಕಿ ವರುಣ್ ಹಾಗೂ ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆ ಅಭಿನಯಿಸಿರುವ “ಕಾಲೇಜ್ ಕುಮಾರ” ಚಿತ್ರವು 2017ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಸಂಪೂರ್ಣ ಹೊಸತನದಿಂದ ಕೂಡಿದ್ದ ಈ ಚಿತ್ರವನ್ನ ಕನ್ನಡ ಸಿನಿ ಪ್ರೇಕ್ಷಕರು ಒಪ್ಪಿಕೊಂಡಿದ್ದರು. ಅಲ್ಲದೆ ಈ ಚಿತ್ರವು ಚಿತ್ರ ವಿಮರ್ಶಕರಿಂದಲೂ ಒಳ್ಳೆಯ ಮನರಂಜನಾತ್ಮಕ ಚಿತ್ರ ಎಂಬ ಪ್ರಶಂಶೆಗೂ ಒಳಗಾಗಿತ್ತು.


ಚಿತ್ರದಲ್ಲಿ ಶಿವು (ರವಿಶಂಕರ್) ದೊಡ್ಡ ಹುದ್ದೆ ಪಡೆಯಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ ಆತನ ಶಾಲಾ ಗೆಳೆಯ ವಸುಗೆ ಒಂದು ಕಂಪೆನಿಯಲ್ಲಿ ಆಡಿಟರ್ ಕೆಲಸ ಸಿಕ್ಕರೆ ಶಿವುಗೆ ಅದೇ ಕಂಪೆನಿಯಲ್ಲಿ ಕ್ಲರ್ಕ್ ಕೆಲಸವಷ್ಟೆ ಸಿಗುತ್ತದೆ. ಹೀಗಾಗಿ ಇಬ್ಬರೂ ಒಬ್ಬರನ್ನೊಬ್ಬರು ದ್ವೇಷಿಸಲು ಆರಂಭಿಸುತ್ತಾರೆ. ಅಲ್ಲದೆ ರವಿಶಂಕರ್ (ಶಿವು) ತನ್ನ ಮಗ ವಿಕ್ಕಿ ವರುಣ್‍ನನ್ನೂ (ಕುಮಾರ್) ವಸುವಿನಂತೆ ದೊಡ್ಡ ಫೈನಾನ್ಷಿಯಲ್ ಆಡಿಟರ್ ಮಾಡುವ ಆಸೆ ಹೊಂದಿರುತ್ತಾರೆ. ಆದರೆ ಮಗ ಕಾಲೇಜಿನಲ್ಲಿ ಅದಕ್ಕೆ ತದ್ವಿರುದ್ಧವಾಗಿ ಬೆಳೆಯುತ್ತಾನೆ. ಕೊನೆಯಲ್ಲಿ ಮಗ ಕುಮಾರ ತಂದೆಯ ಆಸೆಯನ್ನು ಈಡೇರಿಸುತ್ತಾನೆಯೇ ? ಇಲ್ಲವೆ..? ಎಂಬುದು ಈ ಚಿತ್ರದ ಕಥಾ ಹಂದರ.

ಚಿತ್ರದಲ್ಲಿ ತಂದೆÀಯ ಪಾತ್ರವನ್ನು ನಿರ್ವಹಿಸಿರುವ ರವಿಶಂಕರ್ ತಮ್ಮ ಅಮೋಘ ನಟನೆಯ ಮೂಲಕ ಇಡೀ ಚಿತ್ರವನ್ನು ಆಕ್ರಮಿಸಿಕೊಂಡಿದ್ದಾರೆ. ಕೆಂಡ ಸಂಪಿಗೆ ನಂತರ ಮತ್ತೆ ದೊಡ್ಡ ಪರದೆಗೆ ಮರಳಿರುವ ವಿಕ್ಕಿ ವರುಣ್ ಈ ಚಿತ್ರದಲ್ಲಿ ತಮ್ಮ ಅಭಿನಯವನ್ನು ಮತ್ತಷ್ಟು ಸುಧಾರಿಸಿಕೊಂಡಿದ್ದರೆ, ಕಿರಿಕ್ ಪಾರ್ಟಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಸಂಯುಕ್ತ ಹೆಗಡೆಗೆ ಈ ಚಿತ್ರದ ಗೆಲವು ಮತ್ತೊಂದು ಸಿಹಿಯಾಗಿದೆ. ಇನ್ನೂ ನಿರ್ದೇಶಕ ಸಂತು ಸಾಮಾನ್ಯವಾದ ಕಥೆಗೆ ಅತ್ಯುತ್ತಮವಾದ ಚಿತ್ರಕಥೆಯನ್ನು ಸಿದ್ದಪಡಿಸಿದ್ದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರೆ, ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳೂ ಮನಮುಟ್ಟುವಂತಿದೆ.

ಒಟ್ಟಿನಲ್ಲಿ ಕಳೆದ ವರ್ಷ ಬಿಡುಗಡೆಯಾಗಿ ಅತ್ಯುತ್ತಮ ಕೌಂಟುಂಬಿಕ ಚಿತ್ರವಾಗಿ ಕನ್ನಡ ಸಿನಿ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದ “ಕಾಲೇಜ್ ಕುಮಾರ” ಇದೇ ಶನಿವಾರ (27.01.2018) ಸಂಜೆ 6 ಗಂಟೆಗೆ ಉದಯ ಟಿವಿಯ ಪ್ರೀಮಿಯರ್ ಶೋನಲ್ಲಿ ಪ್ರಸಾರವಾಗಲಿರುವುದು ವಿಶೇಷ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com