ಉತ್ತರಹಳ್ಳಿಯಲ್ಲಿ “ವೈಷ್ಣವಿ – ವೈಭವಿ” ಥಿಯೇಟರ್ ಉದ್ಘಾಟನೆ ಮಾಡಿ ಶುಭಕೋರಿದ ಜೋಗಿ ಪ್ರೇಮ್
ಕರ್ನಾಟಕ ಚಲನಚಿತ್ರರಂಗದಲ್ಲಿ ಪ್ರದರ್ಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನರಸಿಂಹಲು ಅವರ ಮಾಲೀಕತ್ವದ ” ವೈಷ್ಣವಿ – ವೈಭವಿ” ಚಿತ್ರಮಂದಿರ ಉತ್ತರಹಳ್ಳಿಯಲ್ಲಿದೆ.
ಈ ಚಿತ್ರಮಂದಿರ ಈಗ ನವೀನ ತಂತ್ರಜ್ಞಾನದೊಂದಿಗೆ ನವೀಕರಣಗೊಂಡಿದೆ. ಇತ್ತೀಚೆಗೆ ಜೋಗಿ ಪ್ರೇಮ್ ಈ ಚಿತ್ರಮಂದಿರವನ್ನು ಉದ್ಘಾಟಿಸಿದರು.
ನಾನು ಈ ಚಿತ್ರಮಂದಿರದಲ್ಲಿ ನಮ್ಮ ಚಿತ್ರದ ಹಾಡುಗಳನ್ನು ನೋಡಿದೆ. ಸೌಂಡ್ ಸಿಸ್ಟಮ್ ಉತ್ತಮ ಗುಣಮಟ್ಟದಿಂದ ಕೂಡಿದೆ.
ಯಾವ ಮಲ್ಟಿಪ್ಲೆಕ್ಸ್ ಗೂ ಕಡಿಮೆ ಇಲ್ಲ. ನರಸಿಂಹಲು ಅವರ ಈ ಪ್ರಯತ್ನಕ್ಕೆ ಒಳಿತಾಗಲಿ ಎಂದರು ಪ್ರೇಮ್.
ಹದಿನೈದು ವರ್ಷದಲ್ಲಿ ಮೂರು ಬಾರಿ ನವೀಕರಿಸಿದ್ದೇನೆ. ಈಗಿನ ಕಾಲಕ್ಕೆ ತಕ್ಕಂತೆ ನಾವು ಬದಲಾಯಿಸುತ್ತಿರಬೇಕು. ಉತ್ತಮ ಗುಣಮಟ್ಟವಿರುವ ಚಿತ್ರಮಂದಿರವಾದರೆ ಜನ ಖಂಡಿತಾ ಬರುತ್ತಾರೆ ಎಂದರು ಚಿತ್ರಮಂದಿರದ ಮಾಲೀಕ ನರಸಿಂಹಲು.
ನಾವು ಕೆಲವು ಸಂಸ್ಥೆಗಳ ಜೊತೆ ಕೈ ಜೋಡಿಸಿ ಉತ್ತಮ ರೀತಿಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಈ ಚಿತ್ರಮಂದಿರವನ್ನು ನವೀಕರಣ ಮಾಡಿದ್ದೇವೆ. ಆದರೆ ಬೆಲೆ ಮಾತ್ರ ಏರಿಕೆ ಮಾಡಿಲ್ಲ. ಮೊದಲಿನಷ್ಟೇ ಇರುತ್ತದೆ. 465 ಸಾಮರ್ಥ್ಯವುಳ್ಳ
ಉತ್ತಮ ಆಸನ, ಸೌಂಡ್ ವ್ಯವಸ್ಥೆ ಹಾಗೂ ತಿಂಡಿ, ತಿನಿಸುಗಳು ಎಲ್ಲಾ ಉತ್ತಮವಾಗಿದೆ.
ಟಿಕೇಟ್ ಹಾಗೂ ಆಹಾರದ ಬೆಲೆ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಸಿಂಗಲ್ ಥಿಯೇಟರ್ ಗಳನ್ನು ಉಳಿಸಿಕೊಳ್ಳುವುದೇ ನಮ್ಮ ಉದ್ದೇಶ ಎಂದರು ನರಸಿಂಹಲು ಅವರ ಪುತ್ರ ಕಿಶೋರ್.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್.ಎಂ.ಸುರೇಶ್, ವಿತರಕ ಭಾಷಾ, ನಾಗಣ್ಣ “ಏಕ್ ಲವ್ ಯಾ” ಚಿತ್ರದ ನಾಯಕ ರಾಣಾ, ನಾಯಕಿ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ನರಸಿಂಹಲು ಹಾಗೂ ಕುಟುಂಬದವರಿಗೆ ಶುಭ ಕೋರಿದರು.