ಫೆಬ್ರವರಿ 2ರಂದು ಜಂತರ್ ಮಂತರ್
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಷೋ ಮೂಲಕ ನಾಡಿನ ಜನರ ಮನವನ್ನು ಗೆದ್ದಿರುವ ಕಲಾವಿದರೆಲ್ಲರೂ ಸೇರಿ ಇದೀಗ ಹಿರಿತೆರೆಯ ಮೂಲಕ ಮತ್ತೆ ಪ್ರೇಕ್ಷಕರನ್ನು ಮನರಂಜಿಸಲು ಬರುತ್ತಿದ್ದಾರೆ. ಹೌದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಬಹುತೇಕ ಕಲಾವಿದರು ಅಭಿನಯಿಸಿರುವ ಹೊಸ ಚಿತ್ರ `ಜಂತರ್ ಮಂತರ್’ ಇದೀಗ ತೆರೆಗೆ ಬರಲು ಸಿದ್ದವಾಗಿದೆ. ಜೀಜಿ ಎಂದೇ ಹೆಸರಾಗಿರುವ ಗೋವಿಂದೇಗೌಡ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಸ್ಯ ಪ್ರಧಾನ ಚಿತ್ರ ಬರುವ ಫೆ.2ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ತಮ್ಮ ಚಿತ್ರದ ವಿಶೇಷತೆಗಳ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಮೊನ್ನೆ ಮಾಧ್ಯಮಗಳ ಮುಂದೆ ಹಾಜರಾಗಿತ್ತು.
ಸಂಪೂರ್ಣ ಹಾಸ್ಯಮಯ ಕಥಾಹಂದರವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಯುವ ಸಂಗೀತ ನಿರ್ದೇಶಕ ರಾಕಿ ಸೋನು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಾನಸ ಹೊಳ್ಳ, ರಾಕಿ ಸೋನು, ಗೋವಿಂದೇಗೌಡ ಮತ್ತು ನವರಸ ನಾಯಕ ಜಗ್ಗೇಶ್ ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರದ ಎಲ್ಲಾ ಹಾಡುಗಳಿಗೂ ನಿರ್ದೇಶಕ ಗೋವಿಂದೇಗೌಡ ಅವರೇ ಸಾಹಿತ್ಯವನ್ನು ರಚಿಸಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ನಟ ಹಾಗೂ ನಿರ್ದೇಶಕ ಗೋವಿಂದೇಗೌಡ (ಜಿ.ಜಿ) ಮಾತನಾಡಿ ನಾನು ಈ ಕಥೆಯನ್ನು ಸುಮಾರು ಮೂರು ವರ್ಷಗಳ ಹಿಂದೆಯೇ ಬರೆದಿದ್ದೆ. ಆದರೆ ಚಿತ್ರದ ಪ್ರಮುಖ ಪಾತ್ರಗಳಿಗೆ ಯಾವ್ಯಾವ ಕಲಾವಿದರನ್ನು ಹಾಕಿಕೊಳ್ಳಬೇಕೆಂಬುದರ ಬಗ್ಗೆ ಗೊಂದಲವಿತ್ತು. ಯಾವಾಗ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಆರಂಭವಾಗಿ ಸೂಪರ್‍ಹಿಟ್ ಆಯಿತೋ, ಆಗ ನಮ್ಮ ಸಿನಿಮಾದ ಯಾವ ಪಾತ್ರಗಳಿಗೆ ಯಾವ ಕಲಾವಿದರು ಬೇಕೆಂಬ ಬಗ್ಗೆ ಸ್ಪಷ್ಟತೆ ಸಿಕ್ಕಿತು. ಕಥೆಯನ್ನು ಮೊದಲು ನಿರ್ಮಾಪಕರ ಬಳಿ ಹೇಳಿದಾಗ ಅವರೂ ಕೂಡ ಖುಷಿಯಿಂದ ಒಪ್ಪಿದರು. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಜನಮನ ಗೆದ್ದಿರುವ ಶಿವರಾಜ್ ಕೆ.ಆರ್. ಪೇಟೆ, ಹಿತೇಶ್, ಸಂಭ್ರಮ, ನಯನಾ, ಮಾಸ್ಟರ್ ಆನಂದ್, ಸಂಜು ಬಸಯ್ಯ, ಉದಯ್ ಮೊದಲಾದ ಕಲಾವಿದರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ವಿ.ಮನೋಹರ್, ಶೋಭರಾಜ್, ಬಿರಾದಾರ್ ಮೊದಲಾದವರು ಕೂಡ ಅಭಿನಯಿಸಿದ್ದಾರೆ ಎಂದು ಹೇಳಿದರು.
`ಕಾಮಿಡಿ ಕಿಲಾಡಿಗಳಂತೆ ಈ ಸಿನಿಮಾದಲ್ಲೂ ಸಂಪೂರ್ಣ ಕಾಮಿಡಿ ಕಥಾನಕವಿರುತ್ತದೆ. ಪ್ರೇಕ್ಷಕರು ಎರಡೂವರೆ ಗಂಟೆಗಳ ಕಾಲ ನಕ್ಕು ನಲಿಯುವಂಥ ಸಬ್ಜೆಕ್ ಚಿತ್ರಲ್ಲಿದೆ. ಕೊನೆಗೆ ಒಂದೊಳ್ಳೆ ಸಂದೇಶ ಕೂಡ ಚಿತ್ರದಲ್ಲಿದೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡ್ಬೇಕು ಅನ್ನುವ ಸಿನಿಮಾ ಇದು’ ಎಂದು ಹೇಳಿದರು.
ಈ ಚಿತ್ರದಲ್ಲಿ ಬರುವ ವಿಶೇಷ ಹಾಡೊಂದಕ್ಕೆ ನವರಸ ನಾಯಕ ಜಗ್ಗೇಶ್ ಅವರು ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ರೆಟ್ರೋ ಶೈಲಿಯಲ್ಲಿ ಬರುವ ಈ ಹಾಡಿಗೆ ಮಾಸ್ಟರ್ ಆನಂದ್ ಮತ್ತು ನಯನಾ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.
ಶ್ರೀ ಹುಲಿಯಮ್ಮ ಮೂವೀ ಮೇಕರ್ಸ್ ಬ್ಯಾನರ್‍ನಡಿಯಲ್ಲಿ ನಿರ್ಮಾಣವಾಗಿರುವ `ಜಂತರ್ ಮಂತರ್’ ಚಿತ್ರವನ್ನು ಶಿವಸುಂದರ್.ಎಲ್ ಮತ್ತು ಬಿ.ನಾಗರಾಜ್ ಡಿ.ಸಾಲುಂಡಿ ಸೇರಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸುರೇಶ್ ಬಾಬು ಅವರ ಛಾಯಾಗ್ರಹಣ ಮತ್ತು ಶಿವರಾಜ್ ಮೇಹು ಅವರ ಸಂಕಲನ ಕಾರ್ಯವಿದೆ.