ನಿತ್ಯಾನಂದ ಸ್ವಾಮಿಗಳ ಜೀವನ ಚರಿತ್ರೆ ‘ಜೈ ಗುರುದೇವ್’…
ತುಳುಭಾಷೆಯಲ್ಲಿ ಈಗಾಗಲೇ ತುಳು ನಾಡಸಿರಿ, ಕೋಟೆ ಚೆನ್ನಯ್ಯ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಹೀಗೆ ಹಲವರ ಬಯಾಗ್ರಫಿ ಚಿತ್ರಗಳು ಬಂದಿವೆ. ಅದಕ್ಕೆ ಈಗ ಹೊಸ ಸೇರ್ಪಡೆ ‘ಜೈ ಗುರುದೇವ್’. 20ನೇ ಶತಮಾನದಲ್ಲಿ ನಿತ್ಯಾನಂದ ಸ್ವಾಮಿಗಳು ಕೇರಳ, ಕರ್ನಾಟಕದ ಕರಾವಳಿ, ಮುಂಬಯಿಯಲ್ಲಿ ಸಂಚರಿಸಿ ಅಸಂಖ್ಯಾತ ಪವಾಡಗಳನ್ನು ಸೃಷ್ಟಿಸಿ, ನೊಂದವರ ಬಾಳಿಗೆ ಬೆಳಕಾದ ಮಹಾಸಂತ, ಅವಧೂತ. ಅವರ ಜೀವನ ಚರಿತ್ರೆಯನ್ನು ಆಧರಿಸಿ ತುಳು ಚಿತ್ರವೊಂದು ತೆರೆಗೆ ಬರಲಿದೆ.
ತುಳು ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಸಂಭಾಷಣೆ ನಿರ್ದೇಶನ ಮಾಡಿದ್ದ ಸುಧಾಕರ ಬನ್ನಂಜೆ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ತುಳುವಿನಲ್ಲಿ “ಪುಂಡಿಪಣವು” ಎಂಬ ಸದಭಿರುಚಿಯ ಚಿತ್ರ ನಿರ್ಮಿಸಿದ ರಾಮಕೃಷ್ಣ ಶೆಟ್ಟಿ ಅವರು ತವಿಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಔರ ಫಿಲ್ಮ್ಸ್, ಭಾರತಿ ಶೆಟ್ಟಿ, ದುಬಾಯ್ ಸಹನಿರ್ಮಾಪಕರು, ವಿ.ಮನೋಹರ್-ಸಂಗೀತ, ನಾಗರಾಜ ಅದ್ವಾನಿ -ಛಾಯಾಗ್ರಹಣ, ಕೆ.ಗಿರೀಶ್ ಕುಮಾರ್ – ಸಂಕಲನ, ತಮ್ಮ ಲಕ್ಷ್ಮಣ -ಕಲೆನಿರ್ದೇಶನ ಮಾಡಲಿದ್ದಾರೆ. ಕಲಾವಿದರ ಆಯ್ಕೆ ನಡೆಯುತ್ತಿದೆ.
ಈ ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆ ಸಮಾರಂಭ ಬಂಟರ ಸಂಘ ಬೆಂಗಳೂರು ಇಲ್ಲಿ ನಡೆಯಿತು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಉಪೇಂದ್ರ ಶೆಟ್ಟಿ ಅವರು ಪ್ರಥಮ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಚಿತ್ರ ನಿರ್ಮಾಪಕರಾದ ದಿವಾಕರ್, ರಾಜಾರಾಂ ಶೆಟ್ಟಿ ಉಪ್ಪಳ, ನಿರ್ದೇಶಕ ಮಂಜು ಹೆದ್ದೂರ್, ಸಂಗೀತ ನಿರ್ದೇಶಕ ವಿ. ಮನೋಹರ್, ಪ್ರಸಾದ್ ಶೆಟ್ಟಿ, ನಟ ರಿಪ್ಪನ್ ಎಡ್ವರ್ಡ್, ನಾಗರಾಜ ಅದ್ವಾನಿ, ಗಿರೀಶ್ ಕುಮಾರ್ ಮುಂತಾದವರು ಹಾಜರಿದ್ದರು.