ಜಗ್ಗೇಶ್‌ ಹೊಸ ಚಿತ್ರ ತೋತಾಪುರಿ.

Published on

336 Views

ನೀರ್‌ದೋಸೆ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಜಯ ಪ್ರಸಾದ್‌ “ಲೇಡೀಸ್‌ ಟೈಲರ್‌’ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದ್ದರು. ಅದ್ಯಾವ ಗಳಿಗೆಯಲ್ಲಿ ಅವರು ಆ ಸಿನಿಮಾವನ್ನು ಘೋಷಿಸಿಕೊಂಡರೋ ಗೊತ್ತಿಲ್ಲ, ಆ ಸಿನಿಮಾ ಸಾಕಷ್ಟು ಗೊಂದಲಗಳಿಗಳಿಂದಲೇ ಸುದ್ದಿಯಾಯಿತೇ ಹೊರತು ಟೇಕಾಫ್ ಆಗಲೇ ಇಲ್ಲ. ಅನೇಕ ಹೀರೋಗಳ ಹೆಸರು ಕೇಳಿಬಂದು ಕೊನೆಗೆ ರವಿಶಂಕರ್‌ ಗೌಡ ಅಂತಿಮವಾಗಿದ್ದರು. ಹಾಗಾದರೆ, “ಲೇಡೀಸ್‌ ಟೈಲರ್‌’ ಮುಗಿಯಿತಾ ಎಂದು ನೀವು ಕೇಳಬಹುದು.

ಸದ್ಯ ವಿಜಯಪ್ರಸಾದ್‌ “ಲೇಡೀಸ್‌ ಟೈಲರ್‌’ ಅನ್ನು ಬದಿಗಿಟ್ಟು, ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದು “ತೋತಾಪುರಿ’. ಈ ಮೂಲಕ ಹಿಟ್‌ ಜೋಡಿ ಕೂಡಾ ಒಂದಾಗಿದೆ. ಹೌದು, “ನೀರ್‌ದೋಸೆ’ಯಂತಹ ಯಶಸ್ವಿ ಚಿತ್ರದ ನಂತರ ವಿಜಯ ಪ್ರಸಾದ್‌ ಹಾಗೂ ನಟ ಜಗ್ಗೇಶ್‌ “ತೋತಾಪುರಿ’ ಮೂಲಕ ಒಂದಾಗುತ್ತಿದ್ದಾರೆ. ಈ ಮೂಲಕ ಜಗ್ಗೇಶ್‌ ಅವರಿಗೆ ಮತ್ತೂಂದು ವಿಭಿನ್ನ ಚಿತ್ರ ಸಿಕ್ಕಂತಾಗಿದೆ. “ತೋತಾಪುರಿ’ ಚಿತ್ರಕ್ಕೆ “ತೊಟ್‌ ಕೀಳ್‌ಬೇಕಷ್ಟೇ’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ.

ಕಾಮಿಡಿ, ಡ್ರಾಮಾ, ವಿಡಂಬನಾತ್ಮಕವಾಗಿ ಸಾಗುವ ಈ ಕಥೆಯಲ್ಲಿ ಜಗ್ಗೇಶ್‌ ಕೃಷಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಗ್ಗೇಶ್‌ ಅವರ ಗೆಟಪ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡುವ ನಿರ್ದೇಶಕ ವಿಜಯಪ್ರಸಾದ್‌, “ಟೈಟಲ್‌ ಕಥೆಗೆ ಅನುಗುಣವಾಗಿದೆ. ಶೀರ್ಷಿಕೆಯಲ್ಲಿ ಆಕರ್ಷಣೆ ಇರಬೇಕೆಂಬುದು ಒಂದು ಕಾರಣವಾದರೆ, ಕಥೆಗೆ “ತೋತಾಪುರಿ’ ತುಂಬಾ ಸೂಕ್ತವಾಗಿದೆ. ಸಿನಿಮಾ ನೋಡಿದ ಮೇಲೆ ನಿಮಗೆ ಮನದಟ್ಟಾಗುತ್ತದೆ’ ಎನ್ನುವುದು ವಿಜಯಪ್ರಸಾದ್‌ ಮಾತು.

ಇನ್ನು ಚಿತ್ರದ ಕುರಿತು ಟ್ವೀಟ್‌ ಮಾಡಿರುವ ಜಗ್ಗೇಶ್‌, “ಕನ್ನಡಿಗರಿಗೆ ನಗೆಯ ರಸದೌತಣ ನೀಡಿದ “ನೀರ್‌ದೋಸೆ’ಯ ನಮ್ಮಿಬ್ಬರ ಜೋಡಿ ಮತ್ತೆ ಒಂದಾಗಿದೆ. ಬಹಳ ಅದ್ಭುತ ಕಥೆ. “ನೀರ್‌ ದೋಸೆ’ಗಿಂತ ಎರಡು ಹೆಜ್ಜೆ ಮುಂದೆ ಎಂದು ಧೈರ್ಯವಾಗಿ ಹೇಳಬಲ್ಲೆ’ ಎಂದು ಜಗ್ಗೇಶ್‌ ಹೇಳಿಕೊಂಡಿದ್ದಾರೆ. “ತೋತಾಪುರಿ’ಯಲ್ಲೂ ಸುಮನ್‌ ರಂಗನಾಥ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com