ಸ್ಯಾಂಡಲ್‍ವುಡ್‍ನ ಹಿರಿಯಣ್ಣನ ಜೊತೆ ಚಿಕ್ಕ ಕಥೆ, ಸಿಕ್ಕಪಟ್ಟೆ ಮಾತು
ಹಿರಿಯರ ಕಾಲಂನಲ್ಲಿ : ನಟ, ನಿರ್ಮಾಪಕ, ನಿರ್ದೇಶಕರಾಗಿ ಸೈ ಎನಿಸಿಕೊಂಡಿರುವ ಶ್ರೀನಿವಾಸಮೂರ್ತಿ. ಇವರು ಮೂಲತಃ ಚಿಕ್ಕಬಳ್ಳಾಪುರ ತಾಲೂಕಿನ ಜಡಲತಿಮ್ಮನಹಳ್ಳಿಯಲ್ಲಿ ಮೇ 15, 1949ರಲ್ಲಿ ಜನಿಸಿದರು. ಅಲ್ಲಿಂದಲ್ಲೇ ಶಾಲೆಯಲ್ಲಿ ವಿದ್ಯಾಭ್ಯಾಸ ಶುರುವಾಗಿ ಸಮೀಪದ ಮುದ್ದೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪಿಯುಸಿ ಮುಗಿಸಿದ್ದಾರೆ.ಇನ್ನೊಂದು ಮುಖ್ಯವಾದ ವಿಷಯವೆಂದರೆ ಸರ್.ಎಂ.ವಿಶ್ವೇಶ್ವರಯ್ಯನವರು ಕೂಡ ಇದೆ ಶಾಲೆಯಲ್ಲಿ ಓದಿರುವುದು ಎಂದು ಜ್ಞಾಪಿಸಿಕೊಂಡು. “ಅಂತಹ ಮಹಾನುಭಾವರು ಓದಿರುವ ಕಾಲೇಜಿನಲ್ಲೇ ನಾನು ಕೂಡ ಪಿಯುಸಿ ಮುಗಿಸಿದೆ” ಎನ್ನುತ್ತಾರೆ ನಟ ಶ್ರೀನಿವಾಸಮೂರ್ತಿ. ಇನ್ನೂ ಇವರ ತಂದೆ ಕೃಷ್ಣಪ್ಪ, ತಾಯಿ ನಾಗಮ್ಮ, ಜಿ.ಕೆ.ಪಿಳ್ಳಪ್ಪ, ಮಾದೇವಯ್ಯ ನಾನೊಬ್ಬ ಒಟ್ಟು ನಮ್ಮ ತಂದೆ ತಾಯಿಯರಿಗೆ ನಾಲ್ಕು ಮಂದಿ ಅಣ್ಣ- ತಮ್ಮಂದಿರು, ಅಕ್ಕ-ತಂಗಿಯರು ಇದ್ದಾರೆ ಜಯಮ್ಮ ಹಾಗೂ ಶಾರದಮ್ಮ ಇದು ನಮ್ಮ ಸಂಸಾರ ಬಳಗದವರು. “ನನಗೆ ಇನ್ನೂ ಚೆನ್ನಾಗಿ ಜ್ಞಾಪಕ ಇದೆ ಆಗ ಇನ್ನೂ ಓದುತ್ತಿದೆ. ವಿಜಿಪುರಕ್ಕೆ ನಾಟಕ ಮಂಡಳಿ ಬಂದಿತ್ತು. ಅದರ ಮಾಲೀಕರು ಎಚ್.ಕೆ.ಯೋಗನರಸಿಂಹ. ಅವರ ನಾಟಕ ಮಂಡಳಿಗೆ ಸೇರಿಕೊಂಡೆ. ಆ ನಾಟಕ ಮಂಡಲಿಯಿಂದ ‘ದೇವದಾಸ’ ನಾಟಕದಲ್ಲಿ ಒಂದು ಪಾತ್ರವನ್ನು ಅಭಿನಯಿಸಿದೆ. ಅಲ್ಲಿಂದ ಶÀುರುವಾಯಿತ್ತು ನನ್ನ ನಟನೆಯ ಬದುಕು” ಎಂದು ಹಳೆಯ ನೆನಪುಗಳನ್ನು ಮೇಲುಕು ಹಾಕಿದರು ಹಿರಿಯ ಕಲಾವಿದರಾದ ಶ್ರೀನಿವಾಸಮೂರ್ತಿ. ಬಣ್ಣ ಎಷ್ಟೇ ಮುಖಕ್ಕೆ ಅಂಟಿದರು, ಅಚ್ಚಿದರು ಜೀವನದ ಸಂಸಾರದ ಸಾಗರದಲ್ಲಿ ಸಾಗಲೇಬೇಕಾಗುತ್ತದೆ. ಹಾಗೆಯೇ ಶ್ರೀನಿವಾಸಮೂರ್ತಿಯವರು ತನ್ನ ಅಕ್ಕನ ಮಗಳಾದ ಪುಷ್ಪರವರನ್ನು ತಮ್ಮ ಜೀವನದ ಜೊತೆಗಾತಿಯಾಗಿ ಸಪ್ತಪಧಿ ತುಳಿದರು.ಇವರು 1972ರಲ್ಲಿ ಬೆಂಗಳೂರಿಗೆ ಬಂದು ನವರಂಗ್ ಬಾರ್‍ನಲ್ಲಿ ಮತ್ತು ಕಾಫಿ ಬೋರ್ಡ್‍ನಲ್ಲಿ ಕೆಲಸ ಮಾಡುತ್ತಿರಬೇಕಾದರೆ 1974ರಲ್ಲಿ ಸರ್ವೆ ಇಲಾಖೆಯಲ್ಲಿ ಕೆಲಸ ಸಿಗುತ್ತದೆ. ಮನಸ್ಸಿನ ಮೂಲೆಯಲೆಲ್ಲೋ ಒಂದು ಕಡೆ ನಾಟಕ, ನಟನೆ ಅನ್ನೋ ಆಸೆ ಅವರನ್ನು ಹಂಬಲಿಸುತ್ತದೆ. ಆಗ ಅವರು ಪ್ರಸನ್ನ ಸಮುದಾಯ ತಂಡದಲ್ಲಿ ‘ವಿಗಡ ವಿಕ್ರಮರಾಯ’ ಎಂಬ ನಾಟಕದಲ್ಲಿ ರಣಧೀರ ಕಂಠೀರವನ ಪಾತ್ರಕ್ಕೆ ನಟಿಸಿ ಜೀವ ತುಂಬುತ್ತಾರೆ. ಆ ನಟನೆಯನ್ನು ನೋಡಿದ ಆಗೀನ ಹೆಸರಾಂತ ನಿರ್ದೇಶಕರಾದ ಸಿದ್ಧಲಿಂಗಯ್ಯನವರು ಗೊರುರು ರಾಮಸ್ವಾಮಿಯವರ ಕಾದಂಬರಿ ಆಧಾರಿತವಾದ ‘ಹೇಮಾವತಿ’ ಎಂಬ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸುವಂತೆ ಆಫರ್ ಕೋಡುತ್ತಾರೆ. ಅದು 1976ರಲ್ಲಿ ತೆರೆಕಂಡ ಇವರ ಮೊದಲ ಚಿತ್ರವಾಗಿದೆ. ಶ್ರೀನಿವಾಸಮೂರ್ತಿಯವರು ಯಾವಾಗಲೂ ಹೇಳುವ ಮಾತೆಂದರೆ “ನನ್ನ ತಂದೆ ನನಗೆ ಜನ್ಮಕೊಟ್ಟರು. ಅದರೆ
ಚಿತ್ರರಂಗದಲ್ಲಿ ನನಗೆ ಜನ್ಮ ಕೊಟ್ಟವರು ಸಿದ್ಧಲಿಂಗಯ್ಯನವರು. ಈಗಲೂ ನಮ್ಮ ತಂದೆ ತಾಯಿಯವರ ಜೊತೆ ಫೋಟೋವಿಟ್ಟು ಪ್ರತಿ ನಿತ್ಯ ನಮಸ್ಕರಿಸುತ್ತೇನೆ.” ಎಂದು ನೆನಪಿಸಿಕೊಳ್ಳುತ್ತಾರೆ.
ಕನ್ನಡ ಸಿನಿಮಾರಂಗದ ಚರಿತ್ರೆಯಲ್ಲಿ ಹೆಸರು ಉಳಿಸಿಕೊಂಡಿರುವ ನಟ, ಈಗಲೂ ನಟನೆಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ಹಿರಿ ಜೀವ ಎಂದರೆ ತಪ್ಪಗಲಾರದೇನೋ?. ಅವರ ನಟನೆಯ ಕನಸ್ಸು ಇನ್ನೂ ಜೀವಂತಿಕೆಯ ಮರವಾಗಿ ಬೆಳೆಯುತ್ತಿದೆ. ಆಗಿನ ನಟರಿಂದ ಹಿಡಿದು, ಈಗೀನ ನಟರವರೆಗೂ ನಟಿಸಿರುವ ನಟನಾಮೂರ್ತಿ. ಸುಮಾರು ಐದು ತಲೆಮಾರಿನವರ ಜೊತೆ ನಟಿಸಿದ ವ್ಯಕ್ತಿ ನಮ್ಮ ಚಿತ್ರರಂಗದ ಹಿರಿಯ ಜೀವ ಶ್ರೀನಿವಾಸಮೂರ್ತಿಯವರು. ಇವರು ಸುಮಾರು 320ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ‘ದೇವರ ಮಕ್ಕಳು’ ಚಿತ್ರವನ್ನು ಮೊದಲ ಬಾರಿಗೆ ನಿರ್ಮಾಣ ಮಾಡಿದ್ದಾರೆ. ಆದಾದ ನಂತರ ‘ತಾಯಿಗೊಬ್ಬ ತರ್ಲೆ ಮಗ’, ‘ನಂಬಿದ್ರೆ ನಂಬಿ ಬಿಟ್ರೆ ಬಿಡಿ’, ‘ಹೊಸಮನೆ ಆಳಿಯ’, ‘ಮಾತೃದೇವೋಭವ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರು ಚಿತ್ರರಂಗಕ್ಕೆ ಬಂದು ಹದಿನೈದು-ಹದಿನಾರು ವರ್ಷಗಳು ಕಳೆದ ಮೇಲೆ ಒಂದು ಸ್ಕೂಟರನ್ನು ತೆಗೆದುಕೊಳ್ಳುತ್ತಾರೆ. ಶ್ರೀನಿವಾಸಮೂರ್ತಿಯವರು ನಾಯಕನಟರಾದ ನಂತರ ಅವರಿಗಿದ್ದ್ದ ಸಂಭಾವನೆ ‘ಹತ್ತು ಸಾವಿರರೂಪಾಯಿ’. “ನಾನು ಮರೆಯಾಲಾರದ ದಿನ ಎಂದರೆ ಮೊದಲಿಗೆ ಕ್ಯಾಮರ ಮುಂದೆ ನಿಂತು ಅಭಿನಯಕ್ಕೆ ತಲೆ ಬಾಗಿದ ಕ್ಷಣವನ್ನು ಹಾಗೂ ನನ್ನ ಮೊದಲ ಸಂಭಾವನೆಯನ್ನು ಎಂದಿಗೂ ನಾನು ಮರೆಯಲಾರೆ.
ಯಾಕಂದರೆ ನಾನೇ ಅಲ್ಲ ಯಾರೇ ಆದ್ರೂ ಅಂತಹ ಅದ್ಬುತ ಕ್ಷಣಗಳನ್ನು ಜೀವನದಲ್ಲಿ ಮರೆಯೋದಿಲ್ಲ”. ಎನ್ನುತ್ತಾ ಕಿರುತೆರೆಯಲ್ಲೂ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಶ್ರೀನಿವಾಸಮೂರ್ತಿಯವರು ‘ಅಣ್ಣ ಬಸವಣ್ಣ’ ಎಂಬ ಧಾರಾವಾಹಿ ಈಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಅಂದಿನಿಂದ ಉತ್ತರ ಕರ್ನಾಟಕದ ಮಂದಿಗೆ ಹೆಸರುವಾಸಿದೆ’ ಎಂದು ನೆನೆಯುತ್ತಾರೆ. ನಿಮ್ಮಗೆ ತುಂಬಾ ಇಷ್ಟವಾದ ನಟ-ನಟಿಯಾರೆಂದರೆ ? ಅವರಿಂದ ಬರುವ ಉತ್ತರ “ನನಗೆ ತುಂಬಾ ಇಷ್ಟವಾದ ನಟಿಯರೆಂದರೆ ಮಂಜುಳಾ, ಜಯಂತಿ. ಮೂಲತಃ ಜಯಂತಿಯವರು ತೆಲುಗಿನವರು ಅವರು ಕನ್ನಡವನ್ನು ಬಳಸುತ್ತಿದ್ದ ರೀತಿಯೇ ಒಂದು ರೀತಿ ಅದ್ಭುತವಾಗಿತ್ತು. ಅವರೇ ಸ್ವತಃ ಕನ್ನಡವನ್ನು ಕಲಿತು ಡಬ್ಬಿಂಗ್ ಮಾಡುತ್ತಿದ್ದರು. ಈ ಇಬ್ಬರು ನಟಿಯರು ನನಗೆ ಅಚ್ಚುಮೆಚ್ಚು. ನಟರ ಬಗ್ಗೆ ಹೇಳೋದಾದರೆ ನಮ್ಮ ಕನ್ನಡಿಗರಿಗೆ ಸದಾ ನೆನಪಾಗೋ ಸಾರ್ವಬೌಮ, ಬಂಗಾರದ ಮನುಷ್ಯ, ಕರುನಾಡಿನ ಗಂಧದ ಮಗ ಡಾ||ರಾಜ್ ಹಾಗೂ ತಮಿಳು, ತೆಲುಗಿನ ಹಿಂದಿನ ಕೆಲವು ನಟರು ನನಗೆ ನೆಚ್ಚಿನ
ನಾಯಕರಾಗಿದ್ದರು”.
ಇಷ್ಟೇಲ್ಲಾ ಹೇಳಿದ ಮೇಲೆ ಶ್ರೀನಿವಾಸಮೂರ್ತಿ ತಮ್ಮ ಮನೆಯಲ್ಲಿ ಯಾರ್ಯಾರು? ಇದ್ದಾರೆ ಎಂಬುದನ್ನು ಚುಟುಕಾಗಿ ಹೇಳಿದ್ದಾರೆ. “ಪತ್ನಿ ಪುಷ್ಪ, ಹಿರಿಯ ಮಗ ನವೀನ್ ಕೃಷ್ಣ, ಸೊಸೆ ಅಶ್ವಿನಿ, ಕಿರಿಯ ಮಗ ನಿಟಿಲ್ ಕೃಷ್ಣ, ಮಗಳು ಯೋಗಿತಾ ಹಾಗೂ ಮೊಮ್ಮಗ ಹರ್ಷಿತ್ಇ ವರ ಜೊತೆ ಹ್ಯಾಪಿ ಲೈಪ್ ಕಳೆಯುತ್ತಿದ್ದೇನೆ. ಹಳೆಯ ಹಾಡೊಂದಿದೆಯಲ್ಲಾ ‘ನಮ್ಮ ಸಂಸಾರ ಆನಂದ ಸಾಗರ’ ಈ ಆನಂದವೇ ನಮ್ಮ ಸಂಸಾರ” ಎನ್ನುತ್ತಾ ತಮ್ಮ ಅನುಭವದ ಕೆಲವು ಮಾಹಿತಿಗಳನ್ನು ನಮ್ಮ ಚಿಕ್ಕ ಸಂದರ್ಶನಕ್ಕೆ ಫುಲ್ ಮಾಕ್ರ್ಸ್ ಕೊಟ್ಟಂತೆ ಹೇಳಿದರು ಶ್ರೀನಿವಾಸಮೂರ್ತಿ.