ಸಿನಿ ತಾರೆಯರಿಂದ ಇಂಡಿಯನ್ ಬೌಲಿಂಗ್‌ಲೀಗ್
ಕರೋನಾ ಎಂಬ ಮಹಾಮಾರಿ ಇಡೀ ಚಿತ್ರರಂಗವನ್ನೇ ತತ್ತರಿಸುವಂತೆ ಮಾಡಿದೆ. ತೀವೃವಾದ ಸಂಕಷ್ಟಕ್ಕೆ ಗುರಿಯಾಗಿರುವ ಚಿತ್ರರಂಗಕ್ಕೆ ಸಹಾಯಹಸ್ತ ಚಾಚಲು ಕಮರ್ ಫಿಲಂ ಫ್ಯಾಕ್ಟರಿ ಮುಂದಾಗಿದೆ. ಇದಕ್ಕಾಗಿ ಇಂಡಿಯನ್ ಬೌಲಿಂಗ್‌ಲೀಗ್ ಎನ್ನುವ ಬೌಲಿಂಗ್ ಪಂದ್ಯಾವಳಿಯನ್ನು ಆಯೋಜಿಸಿದೆ. ಇದರ ನೇತೃತ್ವವನ್ನು ಕಮರ್ ಫಿಲಂ ಫ್ಯಾಕ್ಟರಿಯ ಕಮರ್ ಅವರು ವಹಿಸಿಕೊಂಡಿದ್ದಾರೆ.
ಚಿತ್ರನಿರ್ಮಾಣ ವಿತರಣೆಯ ಜೊತೆ ಕ್ರೀಡಾ ಚಟುವಟಿಕೆಗಳಲ್ಲೂ ತೊಡಗಿಕೊಂಡಿರುವ ಕಮರ್ ಅವರು ಕರೋನಾ ಆಪತ್‌ಕಾಲದಲ್ಲಿ ಕಲಾವಿದರ, ತಂತ್ರಜ್ಞರ ನೆರವಿಗೆ ಮುಂದಾಗಿದ್ದಾರೆ. ಮೂರು ವರ್ಷಗಳ ಹಿಂದೆ ನಮ್ಮ ನೆಲದ ಕನ್ನಡ ಚಲನಚಿತ್ರ ತಾರೆಗಳನ್ನೇ ಸೇರಿಸಿಕೊಂಡು ಬಾಕ್ಸ್ ಕ್ರಿಕೆಟ್ ಲೀಗ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದರು. ಸುಮಾರು ೧೫೦ ಸಿನಿಮಾ ಕಲಾವಿದರು, ತಂತ್ರಜ್ಞರು ಸೇರಿ ಆಡಿದ ಬಿಸಿಎಲ್ ಯಶಸ್ವಿಯಾಗಿತ್ತು.
ಅದೇರೀತಿ ಈಗ ಇಂಡಿಯನ್ ಬೌಲಿಂಗ್ ಲೀಗ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದ್ದು, ಇಲ್ಲಿ ಒಟ್ಟು ೮೦ ಜನ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ೪೦ ಜನ ಪುರುಷರು, ೪೦ ಜನ ಮಹಿಳಾ ಕಲಾವಿದರು ಭಾಗವಹಿಸಲಿದ್ದಾರೆ. ಇಲ್ಲಿ ಒಟ್ಟು ಹತ್ತು ಪಂದ್ಯಾವಳಿಗಳು ನಡೆಯಲಿದ್ದು, ಪ್ರತಿ ಟೀಮ್‌ನಲ್ಲಿ ೪ ಜನ ಪುರುಷರು ಹಾಗೂ ೪ ಜನ ಮಹಿಳೆಯರು ಸೇರಿ ಒಟ್ಟು ಎಂಟು ಜನರಿರುತ್ತಾರೆ. ಡಿಸೆಂಬರ್ ಮೊದಲವಾರ ಈ ಬೌಲಿಂಗ್‌ಲೀಗ್ ಪಂದ್ಯಾವಳಿಗಳು ನಡೆಯಲಿದ್ದು, ಇದಕ್ಕಾಗಿ ನವೆಂಬರ್ ಅಂತ್ಯದಲ್ಲಿ ರಿಹರ್ಸಲ್ ನಡೆಯಲಿದೆ. ಇಟಿಏ ಮಾಲ್‌ನ ಫನ್ ಫ್ಯಾಕ್ಟರಿ ಆವರಣದಲ್ಲಿ ಈ ಪಂದ್ಯಾವಳಿಗಳನ್ನು ಆಯೋಜಸಲಾಗಿದೆ.
ಕನ್ನಡ ಚಿತ್ರರಂಗದ ಕಲಾವಿದರ ನಡುವೆ ನಡೆಯಲಿರುವ ರೋಚಕವಾದ ಪಂದ್ಯಾವಳಿಗಳನ್ನು ವೀಕ್ಷಿಸುವಂಥ ಸದವಕಾಶ ಕನ್ನಡ ಸಿನಿಪ್ರೇಮಿಗಳಿಗೆ ಲಭಿಸಲಿದೆ ಈ ಪಂದ್ಯಾವಳಿಗಳ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು. ಕಲಾವಿದರಾದ ಶ್ರೀಮತಿ ಪ್ರಿಯಾಂಕ ಉಪೇಂದ್ರ, ದೀಪಿಕಾದಾಸ್, ಕೊಮಿಕಾ ಸಿನ್ಹಾ, ತರುಣ್ ಚಂದ್ರ, ನಿರ್ಮಾಪಕ ಕಮರ್ ಸೇರಿದಂತೆ ಹಲವಾರು ಕಲಾವಿದರು ಇಲ್ಲಿ ಉಪಸ್ಥಿತರಿದ್ದು ಈ ಬೌಲಿಗ್ ಲೀಗ್‌ನ ರೂಪುರೇಷೆಗಳ ಬಗ್ಗೆ ವಿವರಿಸಿದರು.