ʻನೋಡಿದವರು ಏನಂತಾರೆʼ ಚಿತ್ರದ ಟೈಟಲ್ ಲಾಂಚ್ ಮಾಡಿದರು ಶ್ರೀಮುರಳಿ
ಜಗತ್ತಿರೋದೇ ಹೀಗೆ… ಎಲ್ಲ ವಿಚಾರಕ್ಕೂ, ಎಲ್ಲ ಸಮಯದಲ್ಲೂ ವಿಪರೀತ ಭಯ ಹುಟ್ಟಿಸುತ್ತದೆ. ಸಾಕಷ್ಟು ಸಲ ಜೊತೆಗೆ ಬದುಕುವವರೂ ಒಂದಲ್ಲಾ ಒಂದು ಬಗೆಯಲ್ಲಿ ಗಾಬರಿಗೊಳಿಸುತ್ತಾರೆ. ಯಾಂತ್ರಿಕ ಬದುಕಿನಲ್ಲಿ ಭಾವನೆಗಳಿಗೆ ಬೆಲೆ ಸಿಗೋದಿಲ್ಲ. ಒಳಮನಸ್ಸಿನ ಸಂಕಟಗಳು ಯಾರಿಗೂ ಅರ್ಥವಾಗೋದಿಲ್ಲ. ಎಲ್ಲವನ್ನೂ ಚಿಂತಿಸುತ್ತಾ ಕೂತರೆ ಎದೆಯೊಳಗಿನ ಭಾವುಕತೆ ಉಸಿರುಗಟ್ಟಿಸುತ್ತದೆ. ಎಲ್ಲದರ ನಡುವೆ ಎಲ್ಲರ ಜೊತೆಗಿದ್ದರೂ ಮನಸ್ಸು ತಬ್ಬಲಿ ಕೂಸಿನಂತೆ ಕೊರಗುತ್ತದೆ. ʻನೋಡಿದವರು ಏನಂತಾರೆ?ʼ ಎನ್ನುವ ಕಾರಣಕ್ಕೆ ನಮ್ಮದಲ್ಲದ ಬದುಕನ್ನು ನಾವು ಸವೆಸುತ್ತಿರುತ್ತೇವೆ. ಇಷ್ಟೇನಾ ಜೀವನ ಅಂತಾ ಎಷ್ಟೋ ಸಲ ಅನ್ನಿಸುವುದುಂಟು. ಇಂಥಾ ಪ್ರಶ್ನೆಗಳಿಗೆ ಉತ್ತರ ನೀಡುವಂತಾ ಸಿನಿಮಾವೊಂದು ಕನ್ನಡದಲ್ಲಿ ರೂಪುಗೊಳ್ಳುತ್ತಿದೆ..
ಹಿಪ್ಪೋ ಕಿಡ್ಡೋ ಸಂಸ್ಥೆಯ ಅಡಿಯಲ್ಲಿ, ಶೋಭಾ ಗೋಪಾಲ್ ಅರ್ಪಿಸಿ, ನಾಗೇಶ್ ಗೋಪಾಲ್ ಮತ್ತು ಮೋನಿಷಾ ಗೌಡ ನಿರ್ಮಿಸುತ್ತಿರುವ ಚಿತ್ರ ʻನೋಡಿದವರು ಏನಂತಾರೆʼ. ನಟ ಶ್ರೀಮುರಳಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಈ ಪೋಸ್ಟರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ʻʻಹಾಗೆ ಮಾಡಿದರೆ ಮಾಡಿದರೆ ನೋಡಿದವರು ಏನಂತಾರೆ? ಹಿಂಗೆ ಮಾಡಿದರೆ ನೋಡಿದವರು ಏನಂತಾರೆ? ಇಂಜಿನಿಯರಿಂಗೇ ಸೇರ್ಕೋ, ಎಂಬಿಬಿಎಸ್ಸೇ ಮಾಡು.. ಇಲ್ದಿದ್ರೆ ನೋಡಿದವರು ಏನಂತಾರೆ? ಹೆಣ್ಣುಮಕ್ಕಳಿಗೆ ಕಾಲು ಸೇರಿಸಿ ಕೂತ್ಕೋ, ನೋಡಿದವರು ಏನಂತಾರೆ? ಸಾಲ ಮಾಡಿಯಾದರೂ ಕಾರು ತಗೊಳ್ಬೇಕು, ಇಲ್ಲಾಂದ್ರೆ ನೋಡಿದವರು ಏನಂತಾರೆ? – ಹೀಗೆ ಹುಟ್ಟಿನಿಂದ ಸಾಯೋತನಕ ಪ್ರತಿಯೊಂದಕ್ಕೂ ನೋಡಿದವರು ಏನಂತಾರೆ ಅಂದುಕೊಳ್ಳುತ್ತಾ ಸಮಾಜಕ್ಕಾಗಿ ಬದುಕುತ್ತಿರುತ್ತೇವೆ. ಕಡೆಗೊಂದು ದಿನ ನಿಜಕ್ಕೂ ಯಾರಾದರೂ ನಮ್ಮನ್ನು ನೋಡ್ತಿದ್ದಾರಾ ಅನ್ನೋ ಡೌಟು ಬರುತ್ತೆ… ನಮಗಾಗಿ ನಾವು ಬದುಕೋದಕ್ಕೆ ಸಾಧ್ಯಾನಾ? ಅಥವಾ ನೋಡಿದವರು ಏನಂತಾರೆ ಅನ್ನೋ ಕಾರಣಕ್ಕೆ ಕೃತಕವಾಗಿ ಬದುಕುತ್ತಿರಬೇಕಾ? ಈ ಎಲ್ಲ ಅಂಶಗಳನ್ನೇ ಸರಕಾಗಿಸಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ʻನೋಡಿದವರು ಏನಂತಾರೆ?ʼ ಎನ್ನುವ ಹೆಸರನ್ನೇ ಇಟ್ಟಿದ್ದೀವಿ. ಸಿದ್ದಾರ್ಥ್ ಎನ್ನುವ ಹುಡುಗನ ಬದುಕಿನ ಪಯಣವನ್ನು ಅನಾವರಣಗೊಳಿಸುವ ಕಥೆ ನಮ್ಮ ಚಿತ್ರದಲ್ಲಿದೆʼʼ ಎನ್ನುವುದು ನಿರ್ದೇಶಕ ಕುಲ್ ದೀಪ್ ಕಾರಿಯಪ್ಪ ಅವರ ವಿವರಣೆ.
ಗುಳ್ಟು ಚಿತ್ರದ ಮೂಲಕ ನಟನಾಗಿ ಎಲ್ಲರಿಗೂ ಪರಿಚಯಗೊಂಡವರು ನವೀನ್ ಶಂಕರ್. ಈಗ ನವೀನ್ ನಟನೆಯ ನೋಡಿದವರು ಏನಂತಾರೆ ಚಿತ್ರ ಚಿತ್ರೀಕರಣದ ಹಂತದಲ್ಲಿದೆ. ಚಿಕ್ಕಮಗಳೂರು, ಮತ್ತು ಬೆಂಗಳೂರಿನಲ್ಲಿ ಎರಡು ಹಂತರ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನುಳಿದ ಭಾಗಗಳನ್ನು ಗೋಕರ್ಣ, ಕೊಡಗು, ಹಂಪಿ, ಮುಂಬೈ ಮುಂತಾದೆಡೆ ಚಿತ್ರೀಕರಿಸಲಾಗುತ್ತಿದೆ. ಇಡೀ ಚಿತ್ರದಲ್ಲಿ ಪ್ರಯಾಣ ಹೆಚ್ಚಿರುವುದರಿಂದ ಲೊಕೇಷನ್ನುಗಳು ಕೂಡಾ ಸಾಕಷ್ಟಿವೆಯಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವನ್ನೂ ಜಯಂತ್ ಕಾಯ್ಕಿಣಿ ಬರೆಯುತ್ತಿದ್ದಾರೆ. ಸಕ್ರೆಡ್ ಗೇಮ್ಸ್ ನಂಥಾ ವೆಬ್ ಸಿರೀಸ್ ಗೆ ಕೆಲಸ ಮಾಡಿದ್ದ, ಮುಂಬೈ ಉತ್ಸವ್ ಸ್ಟುಡಿಯೋದ ಮಯೂರೇಶ್ ಅಧಿಕಾರಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಉಗ್ರಂ, ಮದಗಜ, ಅಮ್ಮಚ್ಚಿಯೆಂಬ ನೆನಪು ಮುಂತಾದ ಸಿನಿಮಾಗಳಿಗೆ ಸಹಾಯಕರಾಗಿದ್ದ ಅಶ್ವಿನ್ ಕೆನ್ನೆಡಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಸುನಿಲ್ ವೆಂಕಟೇಶ್ ಮತ್ತು ನಿರ್ದೇಶಕರು ಸೇರಿ ಸಂಭಾಷಣೆ ರಚಿಸಿದ್ದಾರೆ. ಕಾಡಿನ ನಡುವೆ ಹಳ್ಳಿ ಮನೆಯ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದ್ದು, ಇನ್ನು ಅರವತ್ತು ದಿನಗಳ ಶೂಟಿಂಗ್ ಬಾಕಿ ಇದೆ. ಅಪೂರ್ವ ಭಾರದ್ವಾಜ್, ಹೊಸ ಕಲಾವಿದೆ ರಮ್ಯ ಕೃಷ್ಣ ಮತ್ತು ಇತರರ ತಾರಾಗಣ ಈ ಚಿತ್ರದಲ್ಲಿದೆ.
ಎರಡೂವರೆವರ್ಷಗಳ ಕಾಲ ಕೂತು ಬರೆದು, ಆರಂಭಿಸಿರುವ ಚಿತ್ರವಿದು. ಬರೆಯುತ್ತಾ ಬರೆಯುತ್ತಾ ಬೇರೆಯದ್ದೇ ಆಯಾಮ ಪಡೆಯುತ್ತಾ ಹೋಯಿತು. ನಟ ನವೀನ್ ಶಂಕರ್ ಅವರಿಗೆ ಗುಲ್ಟೂ ಚಿತ್ರದ ಪಾತ್ರಕ್ಕೂ ಈ ಚಿತ್ರದ ಕ್ಯಾರೆಕ್ಟರಿಗೂ ಸಂಪೂರ್ಣ ಕಾಂಟ್ರಾಸ್ಟ್ ಇದೆ. ಆದರೆ, ಅಲ್ಲಿನಂತೆ ಈ ಚಿತ್ರದ ಪಾತ್ರದಲ್ಲೂ ಕೂಡಾ ಸಂಘರ್ಷದ ಗುಣವಿದೆ.
*-ಕುಲದೀಪ್ ಕಾರಿಯಪ್ಪ, ನಿರ್ದೇಶಕ*
*ಮುರಳಿ ಮಾತು*
ನೋಡಿದವರು ಏನಂತಾರೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನೋಡಿದವರು ನಿಜಕ್ಕೂ ದಂಗಾಗುತ್ತಾರೆ. ಹೊಸ ನಿರ್ದೇಶಕರು, ಹೊಸ ಕಲಾವಿದರು, ಹೊಸ ತಂತ್ರಜ್ಞರು ಹೊರಬಂದಷ್ಟೂ ಚಿತ್ರರಂಗ ಕಳೆಗಟ್ಟುತ್ತದೆ. ಗುಳ್ಟು ಚಿತ್ರ ತೆರೆಗೆ ಬಂದ ಸಂದರ್ಭದಲ್ಲಿ ಎಲ್ಲೆಲ್ಲೂ ಆ ಚಿತ್ರದ ಹೀರೋ ನವೀನ್ ಶಂಕರ್ ಬಗ್ಗೆ ಮಾತು ಕೇಳಿಬರುತ್ತಿದ್ದವು. ಆಗಿನಿಂದಾ ಇವರ ಬಗ್ಗೆ ನಾನು ಕುತೂಹಲಗೊಂಡಿದ್ದೆ. ನವೀನ್ ಅವರ ಸಹಜ ಅಭಿನಯ ಕೂಡಾ ನನಗೆ ಅಪಾರವಾಗಿ ಇಷ್ಟವಾಗಿತ್ತು. ಇವತ್ತು ಅವರ ನಟನೆಯ ಹೊಸ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದು ಖುಷಿಯ ವಿಚಾರವಾಗಿದೆ.
*-ಶ್ರೀಮುರಳಿ*
ಪ್ರತಿಯೊಬ್ಬರ ಜೀವನದಲ್ಲಿ ನಡೆಯುವಂಥಾ ಕಥೆಯ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಕಿರುತೆರೆ ಮತ್ತು ಕಲಾತ್ಮಕ ಸಿನಿಮಾದಲ್ಲಿ ನಟಿಸಿದ್ದ ನಾನು ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಕಮರ್ಷಿಯಲ್ ಚಿತ್ರವಿದು. ನವೀನ್ ರಂಥಾ ಬ್ರಿಲಿಯಂಟ್ ನಟನ ಜೊತೆ ತೆರೆ ಹಂಚಿಕೊಂಡಿರೋದು ನನ್ನ ಪಾಲಿಗೆ ಒಂದೊಳ್ಳೆ ಅನುಭವ
*-ಅಪೂರ್ವ ಭಾರದ್ವಾಜ್* ನಾಯಕಿ