ಗೂಸಿ ಗ್ಯಾಂಗ್ ಗೋ ಸೀ ಆಗಲಿ – ಡಾ.ಹಂಸಲೇಖಾ
ಗುರುವಾರ ಎಸ್‍ಆರ್‍ವಿ ಪ್ರಿವ್ಯೂ ಚಿತ್ರಮಂದಿರ ಕರಗ ಹಬ್ಬದಂತೆ ಕಂಡುಬಂದಿತ್ತು. ‘’ಗೂಸಿ ಗ್ಯಾಂಗ್ ‘’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣಗೊಳಿಸಲು ನಾದಬ್ರಹ್ಮ, ಹಾಸ್ಯಬ್ರಹ್ಮ ಹಾಜರಾತಿ ಅದಕ್ಕೆ ಕಾರಣವಾಗಿತ್ತು. ಟ್ರೈಲರ್, ಎರಡು ಹಾಡುಗಳನ್ನು ತೋರಿಸಿದ ನಂತರ ನಿರೂಪಕಿ ಮಧುರ ಸರದಿಯಂತೆ ಮೊದಲು ಮೈಕ್‍ನ್ನು ಜಗ್ಗೇಶ್‍ಗೆ ಹಸ್ತಾಂತರಿಸಿದಾಗ ಅವರ ಕಾಮಿಡಿ ಮಾತುಗಳು ಈ ರೀತಿ ಇತ್ತು. ನಮ್ಮ ಕಾಲದಲ್ಲಿ ಚಿತ್ರಗಳನ್ನು ಕುಟುಂಬಸಮೇತ ನೋಡುತ್ತಿದ್ದರು. ಈಗ ಕಾಲಬದಲಾಗಿದೆ. 24-60ರ ವಯೋಮಾನದವರು ಮಾತ್ರ ಟಾಕೀಸ್‍ಗೆ ಬರುತ್ತಿರುವುದರಿಂದ ಅವರಿಗೋಸ್ಕರ ನಿರ್ಮಾಣ ಮಾಡಬೇಕಾಗಿದೆ. ಇದಕ್ಕೆತಕ್ಕಂತೆ ಪ್ರಮೋಷನ್ ಅಗತ್ಯವಿದೆ. ಡಾ.ಅಂಬೇಡ್ಕರ್ ಹೇಳಿದಂತೆ ಆಚಾರ,ವಿಚಾರದಿಂದ ಪ್ರಚಾರ ಮಾಡಬೇಕು. ತಂದೆ-ತಾಯಿರಿಂದ ಶಹಬ್ಬಾಸ್ ಬಂದರೆ ಬದುಕಿದ್ದು ಸಾರ್ಥಕವಾಗುತ್ತದೆ.
ಚಿತ್ರರಂಗ ಎಲ್ಲವನ್ನು ಕೊಟ್ಟಿದೆ. ನನಗೆ ನೀಡಿದಂತೆ ಮುಂದೆ ಬರುವ ಕಲಾವಿದರನ್ನು ಅರಸು ಎಂದು ದೇವರನ್ನು ಪ್ರಾರ್ಥಿಸುತ್ತೆನೆ. ಸ್ವಾರ್ಥ ಬೇಡ, ತೃಪ್ತಿ ಇರಬೇಕು. ನಮ್ಮ ಚಂದನವನ ಪ್ರಸಕ್ತ ಒಳ್ಳೆ ಸ್ಥಿತಿಯಲ್ಲಿದೆ. ಪುಟಾಣಿ ಕರ್ನಾಟಕದಲ್ಲಿ ರಾಜಕುಮಾರ 50ಕೋಟಿ ಗಳಿಕೆ ಸಾಧಿಸಿದೆ. ಇದರಂತೆ ಎಲ್ಲಾ ಚಿತ್ರಗಳು ಆಗಬೇಕು. ಎಷ್ಟೋ ವರ್ಷಗಳ ನಂತರ ಹಂಸಲೇಖ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ. ಚಾಮುಂಡೇಶ್ವರಿ ಸ್ಟುಡಿಯೋ ಒಂಥರ ವಿಶ್ವವಿದ್ಯಾಲಯ ಕ್ಯಾಂಪಸ್ ಇದ್ದಂತೆ, ಆ ಜಾಗದಲ್ಲಿ ಅವರನ್ನು ಮೊದಲಬಾರಿ ನೋಡಿದ್ದೆ. ಅವರಲ್ಲಿ ಅಕ್ಷರದ ಗಣಿ ತುಂಬಿದೆ. ಅವರ ಹಾಡುಗಳು ಈಗಲೂ ಗುನುಗುವಂತಿದೆ. ಯಾವುದೇ ಹಾಡು ತೆಗೆದುಕೊಂಡರೂ ಅದರಲ್ಲಿ ಸರ್ ಲೇಪನ ಕಾಣುತ್ತದೆ. ತಮಿಳಿನಲ್ಲಿ ಇಳಯರಾಜರಂತೆ, ಇಲ್ಲಿ ಹಂಸಲೇಖಾ ಕಾಣುತ್ತಾರೆ ಎಂದು ಕ್ಯಾಚ್ ಆಫೀಸ್, ಹಂಸಲೇಖಾ ಸಹಾಯ ಮಾಡಿದ್ದು, ಕಷ್ಟದ ದಿನಗಳನ್ನು ವಿವರವಾಗಿ ಭಾವಭಂಗಿಗಳ ಮೂಲಕ ಹೇಳಿಕೊಂಡು ನಗಿಸಿದರು ನವರಸನಾಯಕ.
ಜಗ್ಗೇಶ್ ಮಾತುಗಳನ್ನು ಆಲಿಸಿದ ಹಂಸಲೇಖಾ ಅವರ ಗುಣ, ಮಾತುಗಾರಿಕೆಯನ್ನು ಹೊಗಳಿದರು. ಮಾತು ಮುಂದುವರೆಸುತ್ತಾ ಕಲಾವಿದರಿಗೆ ಬದ್ದತೆ ಇದ್ದರೆ, ಕಳೆ ತುಂಬುತ್ತೆ. ಇದರಿಂದ ಕಲೆಗೆ ಬೆಲೆ ಸಿಗುತ್ತೆ. ಇದನ್ನು ಪ್ರೀತಿಯಿಂದ ಮಾತ್ರ ಪಡೆಯಲು ಸಾಧ್ಯ. ನಾವು ಸೆನ್ಸ್ ಮೂಲಕ ಕೆಲಸ ಮಾಡುತ್ತಿದ್ದರೆ, ಈಗಿನವರು ಲೆನ್ಸ್ ಮೂಲಕ ಹೋಗುತ್ತಾರೆ. ಕುಡುಕರ ಹಾಡು ಇಲ್ಲಿರುವಷ್ಟು ಭಾರತೀಯ ಚಿತ್ರರಂಗದಲ್ಲಿ ಎಲ್ಲೂ ಇಲ್ಲ. ಗೂಸಿ ಗ್ಯಾಂಗ್ ಜನರಿಗೆ ಗೋ ಸೀ ಆಗಲಿ ಎಂದು ಶಿಷ್ಯರುಗಳಾದ ಸಾಹಿತಿ ಕಲ್ಯಾಣ್, ಚಿತ್ರಕ್ಕೆ ಸಂಗೀತ ಒದಗಿಸಿರುವ ಆರವ್‍ರುಶಿಕ್ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಥ್ರಿಲ್ಲರ್ ಕತೆಯಾಗಿದ್ದು, ನಿಘಂಟುದಲ್ಲಿ ಇರುವ ಪದವನ್ನು ಶೀರ್ಷಿಕೆಯಾಗಿ ಬಳಸಲಾಗಿದೆ. ಗೂಸಿ ಹುಡುಗರು ಅಂತ ಯಾಕೆ ಕರೆಯುತ್ತಾರೆ ಅಂತ ತಿಳಿಯಲು ಚಿತ್ರ ನೋಡಿ ಎಂದರು ಚಿತ್ರಕತೆ,ನಿರ್ದೇಶನ ಮಾಡಿರುವ ರಾಜುದೇವಸಂದ್ರ.
ಕತೆ ಬರೆದು ಮಗನ ಸಲುವಾಗಿ ನಿರ್ಮಾಣ ಮಾಡಿರುವ ಕೆ.ಶಿವಕುಮಾರ್ ನಿರ್ದೇಶಕರೊಂದಿಗಿನ ಹೊಂದಾಣಿಕಯಿಂದ ಚಿತ್ರವು ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಮಾದ್ಯಮದ ಸಹಕಾರಬೇಕೆಂದು ಕೋರಿದರು.
ಚಿಕ್ಕ ವಯಸ್ಸಿನಿಂದಲೂ ಅಭಿನಯದಲ್ಲಿ ಆಸಕ್ತಿ ಇತ್ತು. ನನ್ನ ಆಸೆಗೆ ಅಪ್ಪ ಚಿತ್ರ ಮಾಡಿದ್ದಾರೆ. ನಿರ್ದೇಶಕರು ಹೃದಯ ಆಗಿದ್ದರೆ, ಪ್ರೇಕ್ಷಕರು ಉಸಿರಾಟವೆಂದು ಬಣ್ಣಿಸಿಕೊಂಡಿದ್ದು ಅಜಯ್‍ಕಾರ್ತಿಕ್.
ಮತ್ತೋಬ್ಬ ನಾಯಕ ಯತಿರಾಜ್‍ಜಗ್ಗೇಶ್ ಆರೋಗ್ಯದಲ್ಲಿ ವ್ಯತ್ಯಯ ಇರುವುದರಿಂದ ಗೈರು ಹಾಜರಿದ್ದರು.. ನಾಯಕಿಯರಾದ ಅನುಷಾರೈ, ಮೋನಿಕಾ, ಸೋನುಪಾಟೀಲ್, ಖಳನಾಯಕ ಅಪ್ಪುವೆಂಕಟೇಶ್‍ಗೆ ಮಾತನಾಡಲು ಅವಕಾಶ ಸಿಗಲಿಲ್ಲ. ತಂಡಕ್ಕೆ ಶುಭ ಹಾರೈಸಲು ಆಗಮಸಿದ್ದ ಹಿರಿಯ ನಿರ್ಮಾಪಕ,ವಿತರಕ ಹೆಚ್.ಡಿ.ಗಂಗರಾಜು ಅವರ 73ನೇ ಹುಟ್ಟಹಬ್ಬವನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು.