ನವೆಂಬರ್ 19 ಕ್ಕೆ ಪ್ರತ್ಯಕ್ಷವಾಗಲಿದ್ದಾರೆ ಗರುಡ ಗಮನ ವೃಷಭ ವಾಹನ
ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿದ ವಿಶೇಷ ಚಿತ್ರ ಗರುಡ ಗಮನ ವೃಷಭ ವಾಹನ. ಈಗಾಗಲೇ ವಿಶೇಷ ಟ್ರೈಲರ್ ನಿಂದ ಸದ್ದು ಮಾಡುತ್ತಿರುವ ಚಿತ್ರ, ಕನ್ನಡ ಸಿನಿಪ್ರಿಯರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ರಕ್ಷಿತ್ ಶೆಟ್ಟಿಯವರು ಹೇಳುವಂತೆ ರಾಜ್ ಬಿ ಶೆಟ್ಟಿಯವರು ಹಾಗೂ ರಿಷಭ್ ಶೆಟ್ಟಿಯವರಲ್ಲಿ ಅಗಾಧ ಪ್ರತಿಭೆ ಹುದುಗಿದೆ ಎನ್ನುವುದಕ್ಕೆ ಈ ಚಿತ್ರದ ಟ್ರೈಲರ್ ಹುಟ್ಟುಹಾಕಿರುವ ನಿರೀಕ್ಷೆಗಳೇ ಸಾಕ್ಷಿ.
ಕರಾವಳಿಯ ಭೂಗತ ಜಗತ್ತಿನ ಸುತ್ತ ಹೆಣೆದಿರುವ ಈ ಕಥಾಹಂದರದಲ್ಲಿ ಗರುಡಗಮನ ಎಂದರೆ ವಿಷ್ಣುವಿನ ಸಾತ್ವಿಕ ಭಾವವಿರುವ ಹರಿ ಎನ್ನುವ ಪಾತ್ರವನ್ನು ರಿಷಬ್ ಶೆಟ್ಟಿಯವರು ನಿರ್ವಹಿಸಿದರೆ, ವೃಷಭವಾಹನ ಅಂದರೆ ಈಶ್ವರನಂತಹ ವಿಪರೀತ ಭಾವದ ಶಿವ ಎನ್ನುವ ಪಾತ್ರದಲ್ಲಿ ರಾಜ್ ಬಿ ಶೆಟ್ಟಿಯವರು ಬಣ್ಣ ಹಚ್ಚಲಿದ್ದಾರೆ.
ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶವನ್ನು ನೀಡಿದ್ದಾರೆ ಶ್ರೀನಿವಾಸ ಕಲ್ಯಾಣ, ಅಳಿದು ಉಳಿದವರು, D/o ಪಾರ್ವತಮ್ಮ ಖ್ಯಾತಿಯ ಮಿಥುನ್ ಮುಕುಂದನ್. ಹಾಗೆಯೇ ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನವನ್ನು ಪ್ರವೀಣ್ ಶ್ರೀಯಾನ್ ನಿರ್ವಹಿಸಿದ್ದಾರೆ.
ಈಗಾಗಲೇ ಕನ್ನಡಕ್ಕೆ ಬಹಳಷ್ಟು ಹಿಟ್ ಚಿತ್ರಗಳನ್ನು ನೀಡಿರುವ ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸ್ವತಃ ರಾಜ್ ಬಿ ಶೆಟ್ಟಿಯವರೇ ಆಕ್ಷನ್ ಕಟ್ ಹೇಳಿದ್ದಾರೆ.
ಬೆಲ್ ಬಾಟಂ ಖ್ಯಾತಿಯ ರಿಷಬ್ ಶೆಟ್ಟಿಯವರು ಮುಖ್ಯ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಸಂಪೂರ್ಣ ಭಾಗವನ್ನು ಅದ್ಭುತವಾಗಿಯೇ ಹ್ಯಾಂಡಲ್ ಮಾಡಲಿದ್ದಾರೆ.
ಲೈಟರ್ ಬುದ್ಧ ಫಿಲಂಸ್ ನಡಿಯಲ್ಲಿ ರವಿ ರೈ ಕೈಲಾಸ ಹಾಗೂ ವಚನ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕನ್ನಡ ಚಿತ್ರರಂಗವನ್ನಷ್ಟೇ ಅಲ್ಲದೆ, ಎಲ್ಲೆಡೆ ಸದ್ದು ಮಾಡುತ್ತಿರುವ ಚಿತ್ರದ ಅದ್ಭುತ ಟ್ರೈಲರ್ ಅನ್ನು ವೀಕ್ಷಿಸಿರುವ ಸಿನಿಪ್ರಿಯರು, ಚಿತ್ರದ ಬಿಡುಗಡೆಯ ದಿನಾಂಕವನ್ನು ಕಾದು ಕುಳಿತಿರುವಂತೆಯೇ, ಇದೇ ಬರುವ ನವೆಂಬರ್ 19 ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಗರುಡ ಗಮನ ವೃಷಭ ವಾಹನ ತೆರೆಕಾಣಲಿದ್ದು, ಬಾಕ್ಸ್ ಆಫೀಸ್ ಧೂಳೀಪಟವಾಗುವ ನಿರೀಕ್ಷೆಯಿದೆ.
ಚಿತ್ರವನ್ನು ಎಲ್ಲರೂ ಥಿಯೇಟರ್ ಗಳಲ್ಲೇ ವೀಕ್ಷಿಸಿ. ಆನಂದಿಸಿ.