ಉದಯ ಟಿವಿಯಲ್ಲಿ ಸಂಭ್ರಮದ “ಗಣೇಶ ಚತುರ್ಥಿ” ಸಂಜೆ 5.30ಕ್ಕೆ “ಐ ಲವ್ ಯು” ಪ್ರಿಮೀಯರ್ ಚಲನಚಿತ್ರ
ಸೋಮವಾರದಿಂದ ಹೊಸ ತಿರುವು ಪಡೆದುಕೊಳ್ಳುವ ಧಾರಾವಾಹಿಗಳು
ಹಬ್ಬಗಳನ್ನು ವಿಜ್ರಂಭಣೆಯಿಂದ ಆಚರಿಸಿ ಜನರಿಗೆ ತೋರಿಸುವುದು ಸರ್ವೇಸಾಮಾನ್ಯ ಆದರೆ ಉದಯ ಟಿವಿಯಲ್ಲಿ ಈ ಸಲದ ಗಣೇಶ ಹಬ್ಬ ಬಹಳ ವಿಶೇಷವಾಗಿದೆ. ಅಂದರೆ ಗಣೇಶ ಚತುರ್ಥಿ ಧಾರಾವಾಹಿಗಳ ಕಥೆಯ ತಿರುವಿಗೆ ಕಾರಣವಾಗಿದೆ. ವಿನಾಯಕ, ಮುಂಬರುವ ಕಥೆಗಳ ತಿರುವಿಗೆ ಕಾರಣಿಕರ್ತನಾಗಿದ್ದಾನೆ. ಅವರಿಗಳಿಗಿರುವ ಸಂಕಷ್ಟಗಳಿಗೆ ವಿಘ್ನರಾಜ ಸಂಕಷ್ಟಹರನಾಗಿದ್ದಾನೆ.ಇದೇ ಸೊಮವಾರದಿಂದ ವಕ್ರತುಂಡನ ವಿಶೇಷ ಸಂಚಿಕೆಗಳು ಉದಯ ಟಿವಿಯಲ್ಲಿ ಪ್ರಸಾರವಾಗುತ್ತವೆ.
ದೇವಯಾನಿ ಧಾರಾವಾಹಿಯಲ್ಲಿ ಗಣೇಶ ಹಬ್ಬದ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತಿದೆ. ಕಥಾನಾಯಕ ಶ್ರೀಗೆ ಕೆಲವು ದಿನಗಳ ಹಿಂದೆ ಅಪಘಾತವಾಗಿ ಅವನನ್ನು ಕಾಡು ಜನಗಳು ಕಾಪಾಡಿರುತ್ತಾರೆ. ಅದರಲ್ಲಿ ಚೆಲ್ವಿ ಎನ್ನುವವಳು ಶ್ರೀನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡು ಅವನು ಬೇಗ ಗುಣಮುಖನಾಗಲು ಕಾರಣವಾಗಿರುತ್ತಾಳೆ. ಒಂದರ್ಥದಲ್ಲಿ ಶ್ರೀ ಇಂದು ಬದುಕಿರುವುದೇ ಚೆಲ್ವಿಯಿಂದ ಎಂಬಂತಾಗಿರುತ್ತದೆ. ಶ್ರೀ ಕೂಡ ಅವಳನ್ನು ಅತ್ಯಂತ ಗೌರವದಿಂದ ಕಾಣುತ್ತಿರುತ್ತಾನೆ. ಆದರೆ ಚೆಲ್ವಿಗೆ ಶ್ರೀ ಮೇಲೆ ಮನಸಾಗಿರುತ್ತದೆ ಆದರೆ ಶ್ರೀಯಲ್ಲಿ ಹೇಳಿಕೊಂಡಿರುವುದಿಲ್ಲ.
ಗಣೇಶ ಹಬ್ಬದ ಸಂದರ್ಭದಲ್ಲಿ ಒಂದೆಡೆ ದೇವಯಾನಿ ಶ್ರೀ ಬದುಕಿದ್ದಾನೆಂದು, ಗಣೇಶ ಹಬ್ಬವನ್ನು ಆಚರಿಸಲೇಬೇಕೆಂದು ಪಟ್ಟು ಹಿಡಿದು ಗಣೇಶನ ಪೂಜೆಯನ್ನು ಮನೆಯಲ್ಲಿ ಏರ್ಪಾಡು ಮಾಡಿಕೊಂಡಿರುತ್ತಾಳೆ.
ಇನ್ನೊಂದೆಡೆ ಕಾಡಿನಲ್ಲಿ ದೇವರ ಮುಂದೆ ಒಂದು ವಿಶೇಷ ಆಚರಣೆ ಮಾಡುವುದಿರುತ್ತದೆ. ಗಂಡ ಹೆಂಡತಿಗೆ ಅಥವಾ ಗಂಡು ಸ್ನೇಹಿತೆಯಂತಿರುವ ತನ್ನ ಗೆಳತಿಗೆ ಕಂಕಣ ಕಟ್ಟುವ ಶಾಸ್ತ್ರವಿರುತ್ತದೆ. ಅಲ್ಲಿ ಹತ್ತಾರು ಜನರ ಮುಂದೆ, ಶ್ರೀ ಚೆಲ್ವಿಗೆ ಕಂಕಣ ಕಟ್ಟಿಬಿಡುತ್ತಾನೆ. ಇದನ್ನು ಕಂಡ ಚೆಲ್ವಿಗೆ ಶ್ರೀ ತನ್ನ ಜೊತೆಗಾರನಾಗಿಬಿಡುತ್ತಾನೆಂಬ ಆಸೆ ಚಿಗುರುತ್ತದೆ. ಗಂಡನನ್ನು ಉಳಿಸಿಕೊಳ್ಳಲು ಗಣೇಶನ ಮೊರೆ ಹೋಗಿರುವ ದೇವಯಾನಿ ಒಂದೆಡೆಯಾದರೆ, ಕಾಡು ಗಣೇಶನ ಸನ್ನಿಧಿಯಲ್ಲಿ ಹೆಂಡತಿಯ ನೆನಪೇ ಇಲ್ಲದೆ, ಶ್ರೀ ಇನ್ನೊಬ್ಬಳ ಬದುಕಿಗೆ ಪ್ರವೇಶಿಸಿಬಿಡುತ್ತಾನಾ ಎಂಬುದೇ ಕುತೂಹಲ.
ದೇವಯಾನಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.
ವಿಶೇಷ ದಿನಗಳಲ್ಲಿ ಸದಾ ಹೊಸತನದೊಂದಿಗೆ ಬರುವ ಸೇವಂತಿ ಧಾರಾವಾಹಿ, ಇದೀಗ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆಯನ್ನ ಹೊತ್ತು ತಂದಿದೆ. ತನ್ನ ಸಾಕುತಂದೆಯನ್ನ ಜೈಲಿನಿಂದ ಬಿಡಿಸುವ ಸಲುವಾಗಿ ನಾಯಕಿ ಸೇವಂತಿ, ಲಾಯರ್ ಅರ್ಜುನನ ಮೊರೆ ಹೋಗುತ್ತಾಳೆ. ಇದನ್ನೇ ತನ್ನ ಸ್ವಾರ್ಥಕ್ಕಾಗಿ ಬಳಸುವ ಅರ್ಜುನ್ ಅವಳನ್ನೇ ಒಪ್ಪಂದದ ಮದ್ವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಹೀಗೆ ಸುಳ್ಳಿನ ಸುಳಿಯಲ್ಲಿ ಬಂಧಿಯಾಗಿರೋ ಈ ಜೋಡಿ ಮೇಲೆ ಮನೆಯವರ ಸಂಶಯ ಹೆಚ್ಚಾಗಿದೆ. ಹೀಗಾಗಿ ಮನೆಯವರ ವಿಶ್ವಾಸ ಗಳಿಸಲು ತಾನೇ ಸೇವಂತಿಯನ್ನ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದು, ಅಲ್ಲೇ ಗಣಪನ ಹಬ್ಬ ಆಚರಿಸುತ್ತಾನೆ. ಆದರೆ ಇವೆಲ್ಲವನ್ನ ಸಹಿಸದ ಪ್ರಿಯಾ ಇಲ್ಲೂ ತನ್ನ ಕುತಂತ್ರ ಬುದ್ಧಿಯನ್ನ ತೋರಿಸುತ್ತಾಳೆ. ಒಂದಷ್ಟು ಡ್ಯಾನ್ಸ್, ಆಟಗಳು ಎಲ್ಲವೂ ಸೇರಿ ಇದೇ ಸೆಪ್ಟಂಬರ್ 3 ಮತ್ತು 4 ರಂದು ಫುಲ್ ಪ್ಯಾಕ್ ಎಂಟರ್‍ಟೈನ್ಮಂಟ್ ಕೊಡೋಕೆ ಸೇವಂತಿ ತಂಡ ಈಗಾಗಲೇ ಸಜ್ಜಾಗಿದೆ.
ಗಣೇಶ ಹಬ್ಬದ ವಿಶೇಷ ಸೇವಂತಿ ಸಂಚಿಕೆ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಕ್ಷಮಾಧಾರಾವಾಹಿಯಲ್ಲಿ, ಗಂಡ ಇಲ್ಲದಿದ್ದರೂ ಒಂಟಿಯಾಗಿ ಯಾರ ಮುಂದೆಯೂ ತಲೆ ಬಾಗದ ಕೈ ಚಾಚದ ಕ್ಷಮಾ ತನ್ನ ಸಂಸಾರವನ್ನು ಪ್ರಾಮಾಣಿಕವಾಗಿ ನಡೆಸುತ್ತಿರುವ ಹೆಣ್ಣು ಮಗಳು. ಕ್ಷಮಾ ಮಗಳಾದ ಜಾಹ್ನವಿ ತನ್ನ ತಂದೆಯನ್ನು ಹುಡುಕುವ ಭರದಲ್ಲಿ ತನ್ನ ಪ್ರಾಣಕ್ಕೆ ಕುತ್ತು ತಂದು ಕೊಟ್ಟಾಗ ಕ್ಷಮಾ ದಿಟ್ಟತನದಿಂದ ಹೋರಾಡಿ ಅವಳನ್ನು ಕಾಪಾಡುವಲ್ಲಿ ಸಫಲಳಾಗುತ್ತಾಳೆ. ಇದೇ ಕಾರಣಕ್ಕೆ ಗಣಪತಿಬಪ್ಪನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸುವ ಕ್ಷಮಾ ವಿಶೇಷವಾಗಿ ಗಣೇಶೋತ್ಸವವನ್ನು ಮಾಡುತ್ತಿದ್ದಾಳೆ. ಹಬ್ಬಕ್ಕೆ ತನ್ನ ಹಿತೈಷಿಗಳಾದ ರವಿಕಾಂತ್ ನನ್ನೂ ಕರೆಯುತ್ತಾಳೆ. ಆದರೆ ರವಿಕಾಂತ್ ಹೇಗಾದರೂ ಈಕೆಯನ್ನು ವಶ ಮಾಡಿಕೊಳ್ಳಬೇಕೆಂದಿರುವ ದುಷ್ಟ. ಇಂತಹವರಿಂದ ಕ್ಷಮಾ ತನ್ನನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ? ಎಂಬುದೇ ಮುಂದಿನ ಕಥಾಹಂದರ. ಗಣಪತಿ ಅರ್ಚನೆಯಿಂದ ಕ್ಷಮಾಳ ಬದುಕಲ್ಲಿರುವ ವಿಘ್ನಗಳೆಲ್ಲ ಪರಿಹಾರವಾಗಿ ಅವಳ ಜೀವನ ಸುಖಮಯವಾಗುತ್ತಾ? ಅವಳ ಹೋರಾಟದ ಬದುಕಿಗೆ ನ್ಯಾಯ ಸಿಗತ್ತಾ?
ಕ್ಷಮಾದಲ್ಲಿ ಗಣೇಶೋತ್ಸವ ಸೋಮವಾರದಿಂದ ಶನಿವಾರ ರಾತ್ರಿ 9.30 ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಮುಖ್ಯತಾರಾಗಣದ, ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ “ಐ ಲವ್ ಯು” ಗಣೇಶ ಚತುರ್ಥಿಯಂದು ಸಂಜೆ 5.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಪ್ರೀತಿ, ಪ್ರೇಮ ಪುಸ್ತಕದ ಬದನೇಕಾಯಿ ಎನ್ನುವ ಸಂತೋಷ್ (ಉಪೇಂದ್ರ) ಒಂದು ಕಡೆ. ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದರ ಮೇಲೆ ಪಿ ಹೆಚ್ ಡಿ ಪಡೆಯಬೇಕು ಎನ್ನುವ ಧರ್ಮಿಕಾ (ರಚಿತಾ ರಾಮ್) ಮತ್ತೊಂದು ಕಡೆ. ಪ್ರೀತಿಗೆ ವಿಭಿನ್ನ ವ್ಯಾಖ್ಯಾನ ನೀಡುವ ಸಂತೋಷ್ ನನ್ನು ಧರ್ಮಿಕಾ ಪರಿಚಯ ಮಾಡಿಕೊಂಡು ಅವನಿಂದ ಪ್ರೀತಿಯ ಅರ್ಥ ತಿಳಿದುಕೊಳ್ಳಲು ಮುಂದಾಗುತ್ತಾಳೆ. ಇಲ್ಲಿಂದ ಇವರಿಬ್ಬರ ಕಥೆ ಶುರು ಆಗುತ್ತದೆ.
ಧರ್ಮಿಕಾಗೆ ಪ್ರೀತಿ ಪಾಠ ಮಾಡಲು ಹೋಗುವ ಸಂತೋಷ್ ತಾನೇ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ, ಧರ್ಮಿಕಾ ಆತನಿಗೆ ಕೈ ಕೊಡುತ್ತಾಳೆ. ಪಾಠ ಮಾಡಲು ಬಂದವನೇ ಪಾಠ ಕಲಿಯುತ್ತಾನೆ. ಲವ್ ಗಿಂತ ಲೈಫ್ ಹೆಚ್ಚು ಎಂದು ದೊಡ್ಡ ಶ್ರೀಮಂತ ಆಗುತ್ತಾನೆ. ಬೇರೆ ಮದುವೆ ಆಗುತ್ತಾನೆ. ಆದರೆ, ಆತ ಸಂತೋಷವಾಗಿ ಇರಲ್ಲ. ಹೀಗಿರುವಾಗ ಆತನಿಗೆ ಮತ್ತೆ ತನ್ನ ಲವರ್ ಅನ್ನು ಭೇಟಿ ಮಾಡುವ ಸಂದರ್ಭ ಬರುತ್ತದೆ. ಆಗ ಏನಾಗುತ್ತದೆ?, ಯಾಕೆ ಆತನ ಲೈಫ್ ಗೆ ಆಕೆ ಮತ್ತೆ ಎಂಟ್ರಿ ಕೊಡುತ್ತಾಳೆ ಎನ್ನುವುದಕ್ಕೆ ಉತ್ತರ ಚಿತ್ರದಲ್ಲಿದೆ.
ಬ್ರಹ್ಮಾನಂದನ್,ಜೈ ಜಗದೀಶ,ಸೋನು ಗೌಡ,ಹೊನ್ನವಳ್ಳಿ ಕೃಷ್ಣ ತಾರಾಗಣದ “ಆಯ್ ಲವ್ ಯೂ” ಚಲನ ಚಿತ್ರ ಇದೇ ಸೊಮವಾರ 5.30ಕ್ಕೆ ಪ್ರಸಾರವಾಗಲಿದೆ.