ಗಮನಂ’ ಗಮನಸೆಳೆಯಿತು ಎಂದ ಶಿವಣ್ಣ…
ಬಹುಭಾಷಾ ನಟಿ ಶ್ರೀಯಾ ಶರಣ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಸಾಹಸಕ್ಕೆ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸಹ ಸಾಥ್ ನೀಡಿದ್ದಾರೆ. ಅರೇ ಇದೇನು ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರಾ ಎಂದುಕೊಳ್ಳಬೇಡಿ. ಬದಲಿಗೆ ಬಹುಭಾಷೆಯಲ್ಲಿ ಸಿದ್ಧವಾಗಿರುವ ‘ಗಮನಂ’ ಚಿತ್ರದ ಕನ್ನಡದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಆಲ್ದಿ ಬೆಸ್ಟ್ ಹೇಳಿದ್ದಾರೆ. ಇಂದು ಬೆಳಗ್ಗೆ 9.09 ನಿಮಿಷಕ್ಕೆ ಕ್ರಿಯಾ ಫಿಲಂ ಕಾರ್ಪ್ ಯೂಟ್ಯೂಬ್ ಚಾನೆಲ್ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕನ್ನಡದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಫ್ಯಾಷನ್ ಡಿಸೈನಿಂಗ್ ಕಲಿತು, ಎಡಿಟಿಂಗ್ ಕೋರ್ಸ್ ಮುಗಿಸಿ, ದೆಹಲಿಯ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿ, ಜತೆಗೆ ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿದ್ದ ಸುಜನಾ ರಾವ್, ಈಗ ‘ಗಮನಂ’ ಮೂಲಕ ನಿರ್ದೇಶಕಿಯಾಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿ ಒಟ್ಟು ಐದು ಭಾಷೆಗಳಲ್ಲಿ ‘ಗಮನಂ’ ತಯಾರಾಗಿದ್ದು, ಚಿತ್ರವನ್ನು ರಮೇಶ್ ಕರುತೂರಿ ಮತ್ತು ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ.
ಕನ್ನಡದಲ್ಲಿ ಶಿವಣ್ಣ, ತೆಲುಗಿನಲ್ಲಿ ಪವನ್ ಕಲ್ಯಾಣ್, ತಮಿಳಿನಲ್ಲಿ ಜಯಂ ರವಿ, ಮಲಯಾಳಂನಲ್ಲಿ ಫಹಾದ್ ಫಾಸಿಲ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಬಹುತಾರಾಗಣದ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರಿದ್ದಾರೆ. ಹಿರಿಯ ನಟ ಚಾರು ಹಾಸನ್, ಶ್ರಿಯಾ ಸರಣ್, ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಂಜಯ್ ಸ್ವರೂಪ್, ಇಂದೂ ಆನಂದ್, ಪ್ರಿಯಾ, ಸುಹಾಸ್, ಮಾಸ್ಟರ್ ನೇಹಾಂತ್, ಬಿತಿರಿ ಸತ್ತಿ, ರವಿಪ್ರಕಾಶ್ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಗಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ.
ಬದುಕಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಹಂಬಲಿಕೆ, ಹುಡುಕಾಟ, ಪರದಾಟಗಳಿರುತ್ತವೆ. ಅದರ ನಡುವೆ ವಿಷಾದ, ನೋವು, ನಲಿವು ಎಲ್ಲವೂ ಸೇರಿಕೊಂಡಿರುತ್ತದೆ. ಮುರಿದುಬಿದ್ದ ಕನಸುಗಳನ್ನೆಲ್ಲಾ ಹರವಿಕೊಂಡು, ಮತ್ತೆ ಜೋಡಿಸಲು ಆದೀತಾ ಅಂತಾ ಆಸೆ ಪಡುವವರು, ಅವರೆದುರು ಕೂತು ʻಇನ್ನೆಲ್ಲಿ ಸಾಧ್ಯʼ ಎಂದು ಅಣಕಿಸಿ ಹೈರಾಣಾಗಿಸುವ ವಾಸ್ತವ. ಯಾರೆಂದರೆ ಯಾರಿಗೂ ಕೇಡು ಬಯಸದ ನಿರ್ಗತಿಕ ಜೀವಗಳು – ಹೀಗೆ ನಗರ ಜೀವನದಲ್ಲಿ ಕಾಣಸಿಗುವ ಒಂದಷ್ಟು ವಿಚಾರಗಳು ʻಗಮನಂʼ ಚಿತ್ರದ ಕಥಾವಸ್ತು.
ಹಿರಿಯ ಸಂಗೀತ ನಿರ್ದೇಶಕ, ಇಳಯರಾಜಾ ʻಗಮನಂʼಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಹಿಂದಿಯ ಮಣಿಕರ್ಣಿಕಾ, ತೆಲುಗಿನ ಗೌತಮೀಪುತ್ರ ಶಾತಕರ್ಣಿ, ವೇದಂ ಮೊದಲಾದ ಸಿನಿಮಾಗಳಿಗೆ ಕ್ಯಾಮರಾ ಕೆಲಸ ನಿರ್ವಹಿಸಿದ್ದ ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣ, ಸಾಯಿ ಮಾಧವ ಬುರಾ ಸಂಭಾಷಣೆ ಬರೆದಿದ್ದಾರೆ.