ಪ್ರತಿಯೊಬ್ಬ ಕನ್ನಡಿಗರ ಹಾಡು.
ಪ್ರತಿಯೊಬ್ಬ ಕನ್ನಡಿಗರ ಹಾಡು.
ಅಭಿಲಾಷ್ ಜಿ.ವಿ. ಅವರೇ ಸಾಹಿತ್ಯ ಬರೆದು, ಸ್ವರ ಸಂಯೋಜಿಸಿ, ನಿರ್ದೇಶಿಸಿ, ಹಣವನ್ನೂ ಹಾಕಿ ಮಾಡಿದ ಕನ್ನಡಪ್ರೇಮದ ಹಾಡನ್ನು ತೋರಿಸಲಾಗಿತ್ತು. ಕನ್ನಡಪ್ರೇಮವನ್ನು ಉದ್ದೀಪಿಸುವ ಬಿಂಬಗಳಿಗಿಂತ ಹೆಚ್ಚಾಗಿ ರಾಜಕಾರಣಿಗಳ ಮುಖವೇ ಇದ್ದ ಆ ವಿಡಿಯೊದಲ್ಲಿ ಪ್ರತಿಯೊಬ್ಬ ಕನ್ನಡಿಗರ ಕೂಗು ಆಗುವಂಥ ಸಂಗತಿಗಳು ಹೆಚ್ಚೇನೂ ಕಾಣಲಿಲ್ಲ.
ಒಂದೂವರೆ ವರ್ಷಗಳ ಹಿಂದೆಯೇ ಈ ಹಾಡನ್ನು ಬರೆದು ಸ್ವರ ಸಂಯೋಜಿಸಿ ಹೇಮಂತ್ ಅವರಿಂದ ಹಾಡಿಸಿ, ಧ್ವನಿಮುದ್ರಿಸಿ ಇಟ್ಟುಕೊಂಡಿದ್ದಾರೆ. ಆದರೆ ರಾಜಕಾರಣಿಗಳು, ಕನ್ನಡಪರ ಹೋರಾಟಗಾರರ ಅಭಿಪ್ರಾಯ ಪಡೆಯುವುದಕ್ಕಾಗಿ ಒಂದೂವರೆ ವರ್ಷ ಕಾದಿದ್ದಾರೆ.
ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪೆÇ್ರ. ದೊಡ್ಡರಂಗೇಗೌಡ ಮತ್ತು ಚಂದ್ರಶೇಖರ ಪಾಟೀಲ ಹಾಜರಿದ್ದರು.
ಕನ್ನಡ ನಾಡಿನ ಸಮಗ್ರ ಇತಿಹಾಸವನ್ನು, ಸಹೃದಯರಲ್ಲಿ ಸುಮಧುರ ಭಾವನೆ ಹುಟ್ಟಿಸುವ ಹಾಗೆಯೇ ನುಡಿಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಅಭಿಲಾಷ್. ಈ ಹಾಡಿನ ಸಾಹಿತ್ಯ ಚೆನ್ನಾಗಿದೆ. ನಮ್ಮ ಮನೆಯ ಮಕ್ಕಳೇ ಕನ್ನಡವನ್ನು ನಿರಾಕರಿಸುತ್ತಿರುವಾಗ ಇಂಥ ಹುಡುಗರ ಪ್ರಯತ್ನ ಖುಷಿಕೊಡುತ್ತದೆ ಎಂದು ಹೇಳಿದ ದೊಡ್ಡರಂಗೇಗೌಡ, ನಿಮ್ಮನ್ನು ಭ್ರಷ್ಟಗೊಳಿಸಲು ಇಡೀ ಗಾಂಧಿನಗರ ಕಾದಿರುತ್ತದೆ. ನೀವು ಮೋಸಹೋಗಬೇಡಿ ಎಂಬ ಕಿವಿಮಾತನ್ನೂ ಹೇಳಿದರು.
ಕನ್ನಡದ ಮಕ್ಕಳಾದ ನಾವೆಲ್ಲ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಬೇಕು. ಆದರೆ ತಾಯಿ ಮಕ್ಕಳನ್ನು ನೋಡಿಕೊಳ್ಳಬೇಕೋ, ಮಕ್ಕಳೇ ತಾಯಿಯನ್ನು ನೋಡಿಕೊಳ್ಳಬೇಕೋ ಎಂಬುದು ಸಂಕೀರ್ಣ ವಿಷಯ ಎಂದರು ಚಂದ್ರಶೇಖರ ಕಂಬಾರ.
ನನ್ನ ಹಾಡನ್ನು ಕೇಳಿ ಹಲವಾರು ಸಂಘಟನೆಗಳು ಹಣ ಕೊಟ್ಟು ಕೊಂಡುಕೊಳ್ಳಲು ಮುಂದೆ ಬಂದಿದ್ದರು. ಆದರೆ ನನಗೆ ನನ್ನ ಹಾಡು ಯಾವುದೋ ಒಂದು ಸಂಘಟನೆಯ ಪಾಲಾಗುವುದು ಇಷ್ಟವಿರಲಿಲ್ಲ. ಎಲ್ಲ ಕನ್ನಡಿಗರ ಕೂಗಾಗಬೇಕು ಎಂಬ ಆಸೆ ಇತ್ತು. ಆದ್ದರಿಂದ ಈ ಹಾಡನ್ನು ಯಾರಿಗೂ ಕೊಡಲಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ಒಂದೊಂದು ರೂಪಾಯಿ ಕೊಟ್ಟರೂ ಸಾಕು. ತುಂಬ ಅದ್ದೂರಿಯಾಗಿಯೇ ಚಿತ್ರೀಕರಣ ಮಾಡಬಹುದು ಎಂದು ತಮ್ಮ ಯೋಜನೆಯ ಬಗ್ಗೆ ಹೇಳಿಕೊಂಡರು ಅಭಿಲಾಷ್.