ಟೆಂಟ್ ಸಿನಿಮಾ ಶಾಲೆಯಲ್ಲಿ ಡ್ರಗ್ಸ್ ನಶೆ
ಸದ್ಯ ಸ್ಯಾಂಡಲ್ವುಡ್ನಲ್ಲಿ ವೈರಲ್ ಆಗ್ತಿರೋ ಒಂದು ಪದ ಅಂದ್ರೆ ಅದು ಡ್ರಗ್ಸ್. ಈ ಬಾರಿ ಮತ್ತೆ ಸ್ಯಾಂಡಲ್ ವುಡ್ ಡ್ರಗ್ಸ್ ಅಂತಾ ಸದ್ದು ಮಾಡ್ತಿದೆ. ಡ್ರಗ್ಸ್ ನಂಟು ಈ ಬಾರಿ ನಿರ್ದೇಶಕ ಜಯತೀರ್ಥ ಅವರನ್ನು ಹುಡುಕಿಕೊಂಡು ಬಂದಿದೆ. ಹೌದಾ! ಅಂತಾ ಹುಬ್ಬೇರಿಸಬೇಡಿ. ಯಾಕಂದ್ರೆ ಈ ಬಾರಿ ಡ್ರಗ್ಸ್ ಸ್ಯಾಂಡಲ್ವುಡ್ನಲ್ಲಿ ಸಕಾರಾತ್ಮಕವಾಗಿ ಸುದ್ದಿ ಮಾಡ್ತಿದೆ. ನಿರ್ದೇಶಕ ಜಯತೀರ್ಥ ಅವರು ಡ್ರಗ್ಸ್ ಕುರಿತಾದ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಅದರ ಹೆಸರು ಟೇಕ್ ಎ ಬ್ರೇಕ್. ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ‘ಡೈರೆಕ್ಷನ್ ಇನ್ ಫಿಲಂ ಮೇಕಿಂಗ್’ ಸಿನಿಮಾ ವಿದ್ಯಾರ್ಥಿಗಳಿಗಾಗಿ ಮಾಡಿರುವ ಕಿರುಚಿತ್ರ ಇದಾಗಿದೆ.
ಟೆಂಟ್ ಸಿನಿಮಾ ಶಾಲೆಯಲ್ಲಿ ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ ಜಯತೀರ್ಥ, ನಿರ್ದೇಶಕ ಆದರ್ಶ್ ಈಶ್ವರಪ್ಪ ಮತ್ತು ಅಭಯ್ ಸಿಂಹ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಿನಿ ಪಾಠವನ್ನು ಕಲಿಯುತ್ತಿದ್ದಾರೆ. ಚಿತ್ರಕಥೆ ರಚನೆ, ನಿರ್ದೇಶನ, ಛಾಯಾಗ್ರಹಣ, ಸಂಕಲನ ಮತ್ತು ಅಭಿನಯ ಸೇರಿದಂತೆ ಸಿನಿಮಾದ ಎಲ್ಲಾ ವಿಭಾಗಗಳ ಕಲಿಕೆಗೆ ಅವಕಾಶವಿದೆ. ಆ ನಂತರದಲ್ಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ಕಿರುಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಾಯೋಗಿಕ ಕಲಿಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಟೆಂಟ್ ಸಿನಿಮಾ ಶಾಲೆಯಲ್ಲಿ ಆಗಾಗ ಕಿರುಚಿತ್ರಗಳ ನಿರ್ಮಾಣ ಆಗುತ್ತಿರುತ್ತವೆ. ಈ ಸಲ ವಿಶೇಷ ಎಂಬಂತೆ ನಿರ್ದೇಶಕ ಜಯತೀರ್ಥ ವಿದ್ಯಾರ್ಥಿಗಳಿಗೆಂದು ಕಿರುಚಿತ್ರ ಮಾಡಿದ್ದಾರೆ. ಹಾಗಂತ ಕಥೆ ಬರೆದು, ಅವರೇ ಸಂಭಾಷಣೆ ರಚಿಸಿ ನಿರ್ದೇಶನ ಮಾಡಿಲ್ಲ. ಬದಲಿಗೆ ಟೆಂಟ್ ಶಾಲೆಯ ವಿದ್ಯಾರ್ಥಿಗಳಿಂದಲೇ ಒಂದು ಸಿನಿಮಾ ಸಿದ್ಧವಾಗಬೇಕಾದರೆ ಏನೆಲ್ಲ ಅವಶ್ಯಕತೆ ಇದೆಯೋ ಅದೆಲ್ಲವನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಿದ್ದಾರೆ. ಜಯತೀರ್ಥ ಅವರದ್ದು ಕೇವಲ ನಿರ್ದೇಶನ ಮಾತ್ರ. ಟೇಕ್ ಎ ಬ್ರೇಕ್ ಶೀರ್ಷಿಕೆಯ ಈ ಕಿರುಚಿತ್ರ ಒಟ್ಟು 20 ನಿಮಿಷದ ಅವಧಿಯದ್ದಾಗಿದೆ. 12 ಜನ ಟೆಂಟ್ ಶಾಲೆಯ ವಿದ್ಯಾರ್ಥಿಗಳು ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಒಟ್ಟು ಎರಡು ವಾರಗಳಲ್ಲಿ ಡ್ರಗ್ಸ್ ಕುರಿತ ಕಿರುಚಿತ್ರ ಮಾಡುವ ಪ್ಲ್ಯಾನ್ ಸಿದ್ಧವಾಗಿ, ಎರಡೇ ದಿನದಲ್ಲಿ ಚಿತ್ರೀಕರಣವನ್ನೂ ಮಾಡಲಾಗಿದೆ. ಫ್ರೊಫೆಷನಲ್ ಆಗಿ ಸಿನಿಮಾ ಶೈಲಿಯಲ್ಲಿಯೇ ಮೂರು ಮೂರು ಕ್ಯಾಮರಾ ಬಳಸಿಕೊಂಡು ಶೂಟ್ ಮಾಡಲಾಗಿದೆ.
ಡ್ರಗ್ಸ್ ಕೇವಲ ಸಿನಿಮಾ ಸೆಲೆಬ್ರಿಟಿಗಳನ್ನು ಹೇಗೆ ಬಾಧಿಸುತ್ತಿದೆ ಎನ್ನುವಂತಹ ಸ್ಯಾಂಡಲ್ವುಡ್ ಡಿಫೆಂಡ್ ಮಾಡಿಕೊಳ್ಳುವಂಥ ವಿಷಯಗಳಿಗೆ ಆದ್ಯತೆ ನೀಡಿಲ್ಲ. ಬದಲಿಗೆ ಡ್ರಗ್ಸ್ ಎಲ್ಲೆಲ್ಲಿ ಹರಡಿಕೊಂಡಿದೆ? ಮುಖ್ಯವಾಗಿ ಸುದ್ದಿ ವಾಹಿನಿಗಳಿಗೆ ಡ್ರಗ್ಸ್ ಏರಿಸುತ್ತಿರುವ ನಶೆ ಎಂಥದ್ದು? ಡ್ರಗ್ಸ್ ಎನ್ನುವ ಸಾಮಾಜಿಕ ಪಿಡುಗನ್ನು ಬದಲಿಸುವ ಬದಲಿಗೆ ಸುದ್ದಿವಾಹಿನಿಗಳು ಅದನ್ನು ಬಿಂಬಿಸಿದ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಇನ್ನೂ ಈ ಕಿರುಚಿತ್ರ ಮೂಡಿಬಂದ ಬಗೆಯನ್ನು ಜಯತೀರ್ಥರವರು ವಿವರಿಸೋದು ಹೀಗೆ. ಈ ಕಿರುಚಿತ್ರದ ಚಿತ್ರಕಥೆ ಸಿದ್ಧ ಮಾಡಿರುವುದು ಟೆಂಟ್ ಸಿನಿಮಾದ ವಿದ್ಯಾರ್ಥಿಗಳು. ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ಮತ್ತು ಆನ್ಲೈನ್ ಚಿತ್ರಕಥಾ ರಚನೆ ಕಾರ್ಯಗಾರದ ವಿದ್ಯಾರ್ಥಿಗಳೊಟ್ಟಿಗೆ ಜಯತೀರ್ಥರವರು ಚರ್ಚೆ ನಡೆಸಿದ್ದಾರೆ. ಡ್ರಗ್ಸ್ ಎನ್ನುವ ವಿಷಯವನ್ನು ಕೊಟ್ಟ ಕೂಡಲೇ ಪ್ರತಿ ವಿದ್ಯಾರ್ಥಿಗಳು ಒಂದೊಂದು ಕಥೆಯನ್ನು ಹೇಳಿದ್ದಾರೆ. ಆದರೆ ಜಯತೀರ್ಥರವರು ಅಂತಿಮವಾಗಿ ಆಯ್ಕೆ ಮಾಡಿದ್ದು ವಿದ್ಯಾರ್ಥಿ ಧನುಷ್ ಹೇಳಿದ ಸಣ್ಣ ಎಳೆ .
ಮೀಡಿಯಾ ಅನ್ನೋದು ಡ್ರಗ್. ಡ್ರಗ್ಸ್ ವಿಷಯ ತೆಗೆದುಕೊಂಡು ಯಾರನ್ನೋ ಹಳಿಯುವುದು, ಯಾರೋ ವ್ಯಕ್ತಿಯ ತೇಜೋವಧೆ ಮಾಡುವುದು, ಇದು ಡ್ರಗ್ಗಿಂತಲೂ ದೊಡ್ಡ ವಿಷ. ಬ್ರೇಕಿಂಗ್ ನ್ಯೂಸ್ ಅನ್ನೋದು ಅದಕ್ಕಿಂತ ದೊಡ್ಡ ನಶೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಯೊಬ್ಬರು ಆಲೋಚನೆ ಮಾಡಿದ್ದು ಜಯತೀರ್ಥರವರನ್ನು ಇಂಪ್ರೆಸ್ ಮಾಡಿತು. ಇದರ ಮೇಲೆ ಪಾತ್ರಗಳ ವಿಸ್ತರಣೆ, ಸೆಟ್ ಸಿದ್ಧತೆ, ಕಿರುಚಿತ್ರದ ರೂಪುರೇಷೆಗಳನ್ನು ಜಯತೀರ್ಥರವರು ನೀಡಿದರು. ಜೊತೆಗೆ ವಿದ್ಯಾರ್ಥಿಗಳು ಸಹ ಈ ಕಥೆಯನ್ನು ವಿಸ್ತರಿಸುವಲ್ಲಿ ತಮ್ಮ ಐಡಿಯಾಗಳನ್ನು ಧಾರೆ ಎರೆದಿದ್ದಾರೆ. ಹೀಗೆ ಸಿದ್ಧವಾದ ಕಥೆಯನ್ನು ಡೈರೆಕ್ಷನ್ ಡಿಪಾರ್ಟ್ಮೆಂಟ್ನ ಧನುಷ್ ಮತ್ತು ಸ್ಕ್ರಿಪ್ಟ್ ಮೇಕಿಂಗ್ ವಿದ್ಯಾರ್ಥಿನಿ ನವ್ಯಶ್ರೀ ಫೈನಲ್ ಡ್ರಾಫ್ಟ್ ರೆಡಿ ಮಾಡಿದ್ದಾರೆ. ಪ್ರಸ್ತುತ ನವ್ಯಶ್ರೀ ಎಫ್ ಎಂ ರೈನ್ ಬೋ ನಲ್ಲಿ ಆರ್ ಜೆ ಆಗಿದ್ದು, ತಮ್ಮ ಕ್ರಿಯಾಶೀಲತೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಟೆಂಟ್ ಸಿನಿಮಾ ಆನ್ಲೈನ್ ಸ್ಕ್ರಿಪ್ಟಿಂಗ್ ಕ್ಲಾಸ್ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ನವೆಂಬರ್ 12 ರಂದು ‘ಟೇಕ್ ಎ ಬ್ರೇಕ್’ ಕಿರುಚಿತ್ರವನ್ನು ನಟ, ನಿರ್ದೇಶಕರಾದ ಶಿವಮಣಿಯವರು ಟೆಂಟ್ ಸಿನಿಮಾ ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಹಿಂದಿನ ಬ್ಯಾಚ್ ನ ಹಲವಾರು ಕಿರುಚಿತ್ರಗಳು ಟೆಂಟ್ ಸಿನಿಮಾ ಯ್ಯೂಟ್ಯೂಬ್ ಚಾನೆಲ್ನಲ್ಲಿದ್ದು ಸಿನಿಮಾಸಕ್ತರ ಗಮನ ಸೆಳೆದಿದೆ.