“ದೃಶ್ಯ 2 ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ, ಈ ಚಿತ್ರದ ಮುಂದುವರೆದ ಭಾಗಕ್ಕೆ ಅನಂತ್ ನಾಗ್ ಸೇರ್ಪಡೆ “

Published on

417 Views

ಈ ಹಿಂದೆ ತೆರೆಕಂಡು ಅಪಾರ ಜನ ಮೆಚ್ಚುಗೆಯನ್ನು ಪಡೆದು ಭಾರಿ ಯಶಸ್ಸನ್ನು ಪಡೆದು ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಹೊಸ ಇಮೇಜ್ ತಂದುಕೊಟ್ಟ “ದೃಶ್ಯ”. ಚಿತ್ರದ ಮುಂದುವರೆದ ಭಾಗ ” ದೃಶ್ಯ 2″ ಇಂದು ಸೆಟ್ಟೇರಿದೆ.

“ದೃಶ್ಯ 2” ಈಗಾಗಲೇ ಮಲೆಯಾಳಂ ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ನಿರ್ದೇಶಕ ಪಿ.ವಾಸು ಅವರ ಸಾರಥ್ಯದಲ್ಲಿ ಕನ್ನಡದಲ್ಲೂ ಚಿತ್ರೀಕರಣ ಆರಂಭವಾಗಿದೆ.

ಕ್ರೇಜಿಸ್ಟಾರ್ ರವಿಚಂದ್ರನ್. ವಿ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಹಿರಿಯನಟ ಅನಂತನಾಗ್ ಚಿತ್ರತಂಡ ಸೇರಿಕೊಂಡಿದ್ದಾರೆ.
ಈ ಚಿತ್ರದ ಮುಹೂರ್ತ ಸಮಾರಂಭ ಯಲಹಂಕದ ಬಳಿಯ ವೈಟ್ ಹೌಸ್ ನಲ್ಲಿ ಸರಳವಾಗಿ ನೆರವೇರಿತು.

ರವಿಚಂದ್ರನ್.ವಿ, ಅನಂತನಾಗ್, ಪಿ.ವಾಸು ಅವರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇಂದಿನಿಂದಲೇ ಚಿತ್ರೀಕರಣ ನಿರಂತರವಾಗಿ ನಡೆಯಲಿದೆ.
“ದೃಶ್ಯ ೨” ಚಿತ್ರತಂಡ ಸೇರಿಕೊಂಡಿರುವುದಕ್ಕೆ ನಟ ಅನಂತನಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಕಳೆದ ಒಂದುವರೆ ವರ್ಷದಿಂದ ಮನೆಬಿಟ್ಟು ಆಚೆ ಬಂದಿಲ್ಲ. ಬಹಳ ದಿನಗಳ ನಂತರ ಆಚೆ ಬಂದಿರುವುದು ನನಗೆ ಖುಷಿಯಾಗಿದೆ. ಎಲ್ಲರೂ ಲಾಕ್ ಡೌನ್ ಸಮಯದಲ್ಲಿ ದಪ್ಪ ಆಗುತ್ತಾರೆ. ನಾನು ನಾಲ್ಕು ಕೆಜಿ ಕಡಿಮೆಯಾಗಿದ್ದೇನೆ ಎಂದರು.
ನನಗೆ ಕಥೆ ಇಷ್ಟವಾಗಿ, ಕೇವಲ ನಾಲ್ಕೈದು ದಿನಗಳಲ್ಲಿ ಈ ಚಿತ್ರದಲ್ಲಿ ನಾನು ಅಭಿನಯಿಸುವುದು ಖಚಿತವಾಯಿತು.

ಸ್ವಲ್ಪ ಸಮಯದಲ್ಲಿ ಚಿತ್ರತಂಡ ಎಲ್ಲಾ ಸಿದ್ದತೆ ಮಾಡಿಕೊಂಡಿರುವುದು ಸಂತಸದ ವಿಷಯ. ಪಿ.ವಾಸು ಅವರ ನಿರ್ದೇಶನದಲ್ಲಿ ನಾನು ನಟಿಸುತ್ತಿರುವ ಎರಡನೇ ಚಿತ್ರವಿದು ಎನ್ನುತ್ತಾರೆ ಅನಂತನಾಗ್.
“ದೃಶ್ಯ” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ನವ್ಯ ನಾಯರ್ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

E4 Entertainment ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸಿ.ವಿ.ಸಾರಥಿ.
ಜೀತು ಜೋಸೆಫ್ ಕಥೆ ಬರೆದಿದ್ದು, ಪಿ.ವಾಸು ನಿರ್ದೇಶನ ಮಾಡುತ್ತಿದ್ದಾರೆ.
ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ , ರವಿ ಸಂತೆಹುಕ್ಲು ಅವರ ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ , ಭರತ್ ಅವರ ನಿರ್ಮಾಣ ನಿರ್ವಹಣೆ
“ದೃಶ್ಯ ೨” ಚಿತ್ರಕ್ಕಿದೆ‌.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com