‘ಬೋರಾಪುರ’ದ ಎರಡು ಟ್ರೇಲರ್ ಅನಾವರಣ
ಡೇಸ್ ಆಫ್ ಬೋರಾಪುರ ಒಂದು ಕುಗ್ರಾಮದಲ್ಲಿ ನಡೆಯುವ ಕಥಾನಕ. ಆದಿತ್ಯ ಕುಣಿಗಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಎರಡು ವಿಶೇಷ ಟ್ರೇಲರ್ ಗಳ ಅನಾವರಣ ಸಮಾರಂಭ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಕಲಾ ನಿರ್ದೇಶಕ ದಿನೇಶ್ ಮಂಗಳೂರು ಅವರ ಪುತ್ರ ಸೂರ್ಯ ಸಿದ್ದಾರ್ಥ ನಾಯಕನಾಗಿ ನಟಿಸಿದ್ದಾರೆ. ನಟ ಕಿಶೋರ್, ರವಿ ಚೇತನ್, ಹರೀಶ್ ರಾಯ್, ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಬಾರಿ ಖ್ಯಾತಿಯ ನಿರ್ದೇಶನ ಎ.ಪಿ. ಅರ್ಜುನ್ ಕೂಡ ಆಗಮಿಸಿ ಚಿತ್ರ ತಂಡಕ್ಕೆ ಶುಭ ಕೋರಿದರು.
ವಿವೇಕ್ ಚಕ್ರವರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು. ಅಜಿತ್ ಕುಮಾರ್ ಗದ್ದಿ ಹಾಗೂ ಮಧು ಬಸವರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಸಿ.ಎಂ. ಅನಿತಾ ಭಟ್ ಪ್ರಕೃತಿ ಮತ್ತು ಅಮಿತ್ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ ಇಡೀ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ.
ಚಿತ್ರದ ಮೊದಲ ಟ್ರೇಲರ್ ಅನಾವರಣಗೊಳಿಸಿ ಮಾತನಾಡಿದ ಕಿಶೋರ್ ಈಗಿನ ದಿನಗಳಲ್ಲಿ ಹಳ್ಳಿಕಥೆ ಇಟ್ಟುಕೊಂಡು ಸಿನಿಮಾ ಮಾಡುವುದೇ ಕಷ್ಟದ ಕೆಲಸ. ಹಳ್ಳಿ ಸೊಗಡು ಭಾಷೆಯ ಸಿನಿಮಾ ನಿರ್ಮಿಸುವುದು ತುಂಬಾ ಖುಷಿಕೊಡುತ್ತದೆ. ಹೊಸ ತಂಡವೊಂದು ಹೊಸ ಪ್ರಯತ್ನ ಮಾಡಿದೆ ಎಂದು ಚಿತ್ರತಂಡಕ್ಕೆ ಶುಭ ಕೋರಿದರು.
ಮತ್ತೊಬ್ಬ ನಟ ಹರೀಶ್ ರಾಯ್ ಮಾತನಾಡಿ ಈ ಚಿತ್ರದ ಟೈಟಲ್ ನಂತೆ ಟ್ರೈಲರ್ ಕೂಡ ವಿಭಿನ್ನವಾಗಿದೆ. ಅಭಿನಯಿಸಿರುವ ಕಲಾವಿದರೂ ಹೊಸಬರಂತೆ ಕಾಣುವುದಿಲ್ಲ ಎಂದು ಹೇಳಿದರು. ನಟ ರವಿ ಚೇತನ್ ಕೂಡ ಚಿತ್ರದ ವಿಶೇಷತೆಯ ಬಗ್ಗೆ ಮೆಚ್ಚಿಕೊಂಡು ಹೊಸಬರ ಚಿತ್ರಗಳ ಹಿಟ್ ಸಾಲಿಗೆ ಈ ಚಿತ್ರವೂ ಸೇರಲಿ ಎಂದು ಹೇಳಿದರು. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಂದು ಹಾಡನ್ನು ಹಾಡಿದ್ದಾರೆ. ವಿಡಿಯೋ ಸಂದೇಶ ಕಳುಹಿಸಿರುವ ಅವರು, ಈ ತಂಡದ ಕಾನ್ಪೆಪ್ಟ್ ನನಗೆ ಇಷ್ಟವಾಯಿತು, ತಿಥಿ, ಒಂದು ಮೊಟ್ಟೆಯ ಕಥೆಯಂತೆ ಈ ಚಿತ್ರವು ಜನರ ಮನಸ್ಸನ್ನು ಗೆಲ್ಲಲಿ ಎಂದು ಹೇಳಿದರು. ನಿರ್ಮಾಪಕರ ಸ್ನೇಹಿತರಾದ ನಟರಾಜ್ ಗೌಡ ಮಾತನಾಡಿ, ಸ್ನೇಹಿತರಾದ ಅಜಿತ್, ಮಧು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ. ನಿರ್ಮಾಪಕರಿಗೆ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದರು.
ನಟ ದಿನೇಶ್ ಮಂಗಳೂರು ಮಾತನಾಡಿ, ಈ ಚಿತ್ರದಲ್ಲಿ ನಾನು ಬೆಟ್ಟೇಗೌಡ ಎಂಬ ಪಾತ್ರವನ್ನು ಮಾಡಿದ್ದೇನೆ. ನನ್ನ ಮಗ ಸೂರ್ಯ ಈ ಸಿನಿಮಾದಲ್ಲಿ ಅಭಿನಯಿಸಿದ್ದಾನೆ ಎಂದು ಹೇಳಿದರು. ನಾಯಕಿಯಾದ ಅಮಿತ್ ರಂಗನಾಥ್ ಮಾತನಾಡಿ ಭಾಗ್ಯ ಎಂಬ ಹಳ್ಳಿಯ ವಿದ್ಯಾವಂತೆ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ನಾನು ಮಾಡುವ ಒಂದು ಕೆಲಸದಿಂದ ಇಡೀ ಹಳ್ಳಿಯ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು.
ಮತ್ತೊಬ್ಬ ನಟಿ ಅನಿತಾ ಭಟ್ ಮಾತನಾಡಿ, ಈ ಚಿತ್ತದಲ್ಲಿ ಒಬ್ಬ ಡ್ರಾಮಾ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಡೇಸ್ ಆಫ್ ಬೋರಾಪುರದ ಇದೀಗ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ.