ಕರಾವಳಿ ಚೆಲುವೆ ಚಿರಶ್ರೀ ಅಂಚನ್
‘ಪವಿತ್ರ’ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕರಾವಳಿ ಬೆಡಗಿ ಚಿರಶ್ರೀ ಅಂಚನ್. ತನ್ನ ಮೊದಲ ಸಿನಿಮಾ ‘ಪವಿತ್ರ’ ದಲ್ಲೇ ತುಳು ಸಿನಿಮಾ ಅವಾರ್ಡ್ಸ್ ಸಮಾರಂಭದಲ್ಲಿ ತನ್ನ ಅತ್ಯುತ್ತಮ ನಟನೆಗೆ ಶ್ರೇಷ್ಠ ನಟಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು. ಚಿರಶ್ರೀ ನಂತರ ‘ರಂಬಾರೂಟಿ’ ಎಂಬ ತುಳು ಚಿತ್ರದಲ್ಲಿ ನಟಿಸಿದ್ದಾರೆ.
‘ಅಮೈ ಅತಡೈತೆ’ ಎಂಬ ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟರು. ಯಂಡಮೂರಿ ವೀರೇಂದ್ರ ನಾಥ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರ ‘ದುಪ್ಪಟ್ಲೋ ಮಿನ್ನಾಗು’ ಚಿತ್ರದಲ್ಲಿ ನಟಿಸಿ ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಇದರ ಕನ್ನಡ ಅವತರಣಿಕೆಯ ‘ಕರಿಗಬಂಳಿಯಲ್ಲಿ ಮಿಡಿನಾಗ’ ಬಿಡುಗಡೆ ಯಾಗಬೇಕಿದೆ. ಉಪೇಂದ್ರ ಅಭಿನಯದ ‘ಕಲ್ಪನಾ-2’ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡ ಇವರು ನಂತರ ಅರವಿಂದ್ ಕೌಶಿಕ್ ನಿರ್ದೇಶನದ ‘ಹುಲಿರಾಯ’ ಚಿತ್ರದಲ್ಲಿ ಮುಗ್ಧ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡರು.
‘ಉಡುಂಬಾ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇನ್ನೇನೂ ತೆರೆಗೆ ಬರುವ ಸಿದ್ದತೆಯಲ್ಲಿದೆ. ಅದರ ನಡುವೆ ಇತ್ತೀಚಿಗೆ ಬಿಡುಗಡೆಯಾದ ಕೋಸ್ಟಲ್ ವುಡ್ ನಲ್ಲಿ ಸದ್ದು ಮಾಡಿದ ‘ಕರ್ಣೆ’ ತುಳು ಚಿತ್ರದಲ್ಲಿ ನಟಿಸಿದ್ದರು. ಈಗ ಅವಿರಾಮ್ ಕಂಠೀರವ ನಿರ್ದೇಶನದ ‘ಕಲಿವೀರ’ ಕನ್ನಡ ಚಿತ್ರದ ಚಿತ್ರೀಕರಣ ದಲ್ಲಿ ಬಿಝಿಯಾಗಿದ್ದಾರೆ ಚಿರಶ್ರೀ. ತುಳು, ಕನ್ನಡ, ತೆಲುಗು ಮಾತ್ರವಲ್ಲದೇ ತಮಿಳಿನ ‘ಅಗವನ್’ ಚಿತ್ರದಲ್ಲೂ ನಟಿಸಿದ್ದರು ಆ ಚಿತ್ರ ಇತ್ತೀಚೆಗೆ ಬಿಡುಗಡೆಗೊಂಡು ಅಲ್ಲಿ ಸೈ ಎನಿಸಿಕೊಂಡ ಚಿರಶ್ರೀಗೆ ‘ಯಾವ ನಾಯಕನಟನೇ ಆಗಲಿ, ಕಥೆ, ಪಾತ್ರ ಚೆನ್ನಾಗಿದ್ದಾರೆ ನಾನು ನಟಿಸಲು ಸಿದ್ಧ. ನಾನು ಮೊದಲು ಅಣ್ಣ, ಅಮ್ಮನ ಜೊತೆ ಚರ್ಚೆ ಮಾಡಿ ಕಥೆ – ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
ಅವರು ನನಗೆ ತುಂಬಾನೇ ಸಪೋರ್ಟಿವ್ ಆಗಿದ್ದಾರೆ’ ಎನ್ನುತ್ತಾರೆ ಮಂಗಳೂರಿನ ಚೆಲುವೆ ಚಿರಶ್ರೀ ಅಂಚನ್. ಪಾತ್ರ ಯಾವುದೇ ಕೊಟ್ಟರು ಅದನ್ನು ನಿಭಾಯಿಸಬಲ್ಲೇ ಎಂಬ ನಂಬಿಕೆ ನನಗಿದೆ ಎನ್ನುವ ಚಿರಶ್ರೀ ಇದುವರೆಗೆ ಮಾಡಿದ ಪಾತ್ರಗಳು ಒಂದಕ್ಕೊಂದು ವಿಭಿನ್ನವಾಗಿದೆ. ಕಿರುತೆರೆಯಲ್ಲಿ ಒಳ್ಳೆ ಅವಕಾಶ ಬಂದರೆ ಅಭಿನಯಿಸುತ್ತೀರಾ? ಎಂದು ಕೇಳಿದಾಗ ಆ ಪ್ರಶ್ನೆಗೆ ಅವರಿಂದ ಬಂದ ಉತ್ತರ…!! ‘ ನಾನು ಇನ್ನು ಅದರ ಬಗ್ಗೆ ಯೋಚನೆ ಮಾಡಿಲ್ಲ. ಸಿನಿಮಾದಲ್ಲೇ ಅವಕಾಶಗಳು ಬರುತ್ತಿವೆ, ಕಿರುತೆರೆ ಬಗ್ಗೆ ಮುಂದೆ ಯೋಚನೆ ಮಾಡೋಣ ಎಂದು ನಗುತ್ತ ಉತ್ತರಿಸುತ್ತಾರೆ ಚಿರಶ್ರೀ.