ಈ ಬಾರಿ ಬಿಗ್ ಬಾಸ್ 7ರ ವಿನ್ನರ್ ಕರಾವಳಿ ಹುಡುಗ ಶೈನ್ ಶೆಟ್ಟಿ…
ಕನ್ನಡ ಮನೋರಂಜನಾ ಲೋಕದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಆಗಿ ಉಡುಪಿ ಮೂಲದ ನಟ ಶೈನ್ ಶೆಟ್ಟಿ ಮಿಂಚಿದ್ದಾರೆ. ಮಜಾ ಟಾಕೀಸ್ ಖ್ಯಾತಿಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ಪ್ರತಿಭಾವಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ವಾಸುಕಿ ವೈಭವ್ ಅವರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 7 ರ ಫಿನಾಲೆ ಮೆಗಾ ಶೋನಲ್ಲಿ ಈ ಕಾರ್ಯಕ್ರಮದ ನಿರೂಪಕ ಚಿತ್ರ ನಟ ಕಿಚ್ಚ ಸುದೀಪ್ ಅವರು ಶೈನ್ ಶೆಟ್ಟಿ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ಬಿಗ್ ಬಾಸ್ ಸ್ಟೇಜ್ ಬಾಣ ಬಿರುಸುಗಳಿಂದ ತುಂಬಿಹೋಯಿತು. ಶೈನ್ ಹೆಸರು ಘೋಷಣೆ ಮಾಡಿ ಕಾರ್ಯಕ್ರಮದಲ್ಲಿ ವಿಜೇತ ಶೈನ್ ಶೆಟ್ರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಟ್ರೋಫಿ ಹಾಗೂ 50 ಲಕ್ಷ ರೂ. ನಗದು ಬಹುಮಾನವನ್ನು ವಿತರಿಸಿದರು.
ಬಾರಿಯ ಬಿಗ್ ಬಾಸ್ ನಲ್ಲಿ 18 ಜನ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದರು. ಇವರಲ್ಲಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆ, ಹಿರಿಯ ನಟ, ನಿರ್ಮಾಪಕ ಜೈ ಜಗದೀಶ್, ರಂಗಭೂಮಿ ಹಾಗೂ ಚಿತ್ರ ನಟ ರಾಜು ತಾಳಿಕೋಟೆ, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಿರೂಪಕಿ, ನಟಿ, ಸುಜಾತ ಅವರು ಪ್ರಮುಖರಾಗಿದ್ದರು. ಒಟ್ಟು 113 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಪ್ರತೀ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಮನೆಯಿಂದ ಹೊರ ಹೋಗುತ್ತಿದ್ದರು.
ಅಂತಿಮವಾಗಿ ಶೈನ್ ಶೆಟ್ಟಿ, ಕುರಿ ಪ್ರತಾಪ್, ವಾಸುಕಿ ವೈಭವ್, ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಅವರಲ್ಲಿ ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಅವರು ಶನಿವಾರ ಮನೆಯಿಂದ ಹೊರಬಿದ್ದಿದ್ದರು. ಆ ಮೂಲಕ ಶೈನ್ ಶೆಟ್ಟಿ, ಪ್ರತಾಪ್ ಮತ್ತು ವಾಸುಕಿ ಬೆಸ್ಟ್ ತ್ರೀ ಸ್ಪರ್ಧಿಗಳಾಗಿ ಮೂಡಿಬಂದಿದ್ದರು.
ಆದಿತ್ಯವಾರ ರಾತ್ರಿ ತನಕವೂ ಮೆಗಾ ಫೈನಲ್ ಗೂ ಮುಂಚೆ ವಾಸುಕಿ ವೈಭವ್ ತೃತೀಯ ಸ್ಥಾನಿಯಾಗಿ ಹೊರಬಿದ್ದರು. ಬಳಿಕ ಇದ್ದಿದ್ದು ಶೈನ್ ಮತ್ತು ಪ್ರತಾಪ್ ಅವರ ನಡುವೆ ವಿನ್ನರ್ ಯಾರೆಂಬ ಕುತೂಹಲ ಜನರಲ್ಲಿ ಮೂಡಿತ್ತು.
ಮೂಲತಃ ಕುಂದಾಪುರದವರಾದ ಶೈನ್ ಶೆಟ್ಟಿ ಶರಶ್ಚಂದ್ರ ಶೆಟ್ಟಿ ಹಾಗೂ ಇಂದಿರಾ ಎಸ್. ಶೆಟ್ಟಿ ದಂಪತಿಯ ಹಿರಿಯ ಪುತ್ರ. ಶೈನ್ ಹೆತ್ತವರು ಕಳೆದ 10 ವರ್ಷಗಳಿಂದ ಉಡುಪಿಯ ಆತ್ರಾಡಿಯಲ್ಲಿ ವಾಸವಾಗಿದ್ದಾರೆ. ಶೈನ್ ಅವರು ತಮ್ಮ ಶಿಕ್ಷಣವನ್ನು ಉಡುಪಿ ಸುತ್ತಮುತ್ತಲೇ ಪೂರೈಸಿದ್ದಾರೆ. ಬ್ರಹ್ಮಾವರದ ಲಿಟಲ್ ರಾಕ್, ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು, ಮಣಿಪಾಲದ ಎಂಪಿಎಂಸಿ, ಹೆಬ್ರಿಯ ನವೋದಯ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಯಾಗಿರುವ ಶೈನ್ ಅವರು ಬಳಿಕ ನಟನಾ ಕ್ಷೇತ್ರದಲ್ಲಿ ಅವಕಾಶವನ್ನು ಅರಸಿಕೊಂಡು ಉದ್ಯಾನ ನಗರಿ ಬೆಂಗಳೂರಿಗೆ ಬಂದರು.
ಬಹುಮುಖ ಪ್ರತಿಭೆಯು ಶೈನ್ ಶೆಟ್ಟಿ ಅವರು ಸ್ಯಾಂಡಲ್‌ವುಡ್‌ನಲ್ಲಿ ಸಾಧನೆ ಮಾಡುವ ಗುರಿ-ಛಲದೊಂದಿಗೆ ಕಳೆದ 7 ವರ್ಷಗಳ ಹಿಂದೆ ಬೆಂಗಳೂರಿಗೆ ಪ್ರಯಾಣಿಸಿದರು. ಇವರಲ್ಲಿರುವ ನಟನಾ ಪ್ರತಿಭೆಗೆ ಆರಂಭದಲ್ಲೇ ಕಿರುತೆರೆಯಲ್ಲಿ ಅವಕಾಶಗಳು ಅರಸಿ ಬಂದವು. ‘ಮೀರಾ ಮಾಧವ’, ‘ಲಕ್ಷ್ಮೀ ಬಾರಮ್ಮ’, ‘ಮನೆದೇವ್ರು’, ‘ಕೋಗಿಲೆ’, ‘ಕನಕ’ ಮತ್ತಿತರ ಧಾರಾವಾಹಿಗಳಲ್ಲಿ ನಟಿಸಿ ಕರ್ನಾಟಕದ ಮನೆಮಾತಾದರು. ಉತ್ತಮ ಕಂಠಸಿರಿಯನ್ನೂ ಹೊಂದಿರುವ ಶೈನ್ ಅವರು ಸುವರ್ಣ ಸ್ಟಾರ್ ಸಿಂಗರ್ ಕಾರ್ಯಕ್ರಮದ ಫೈನಲ್ ಹಂತದವರೆಗೂ ತಲುಪಿದ್ದರು. ಶೈನ್ ಅವರು ‘ಕುಡ್ಲ ಕೆಫೆ’, ‘ರಂಗ್’ ಎಂಬ ಎರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತುಳು ಚಿತ್ರರಂಗದಲ್ಲೂ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ.
ಇನ್ನುಳಿದಂತೆ ‘ಒಂದು ಮೊಟ್ಟೆಯ ಕಥೆ’, ‘ಅಸ್ತಿತ್ವ’, ‘ಜೀವನ ಯಜ್ಞ’, ‘ಕ’ ಮೊದಲಾದ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಿದ್ದಾರೆ. ಗಾಯಕರೂ, ಕಾರ್ಯಕ್ರಮ ನಿರೂಪಕರೂ ಆಗಿರುವ ಶೈನ್ ಶೆಟ್ರು ತಮ್ಮ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡವರು. ಕಠಿಣ ಪರಿಶ್ರಮದ ಮೂಲಕ ಚಿತ್ರರಂಗದಲ್ಲಿ ತನ್ನ ಛಾಪನ್ನು ಮೂಡಿಸುತ್ತಿರುವ ಕರಾವಳಿಯ ಈ ಪ್ರತಿಭೆಯ ಮುಡಿಗೆ ಇದೀಗ ಬಿಗ್ ಬಾಸ್ ಕಿರೀಟ ಲಭಿಸಿರುವುದು ಅವರ ಪ್ರತಿಭೆಗೆ ಸಿಕ್ಕ ಮನ್ನಣೆಯಾಗಿದೆ.
ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ಎರಡನೇ ಸ್ಥಾನ ಗಳಿಸಿದ ಕುರಿ ಪ್ರತಾಪ್ ಮತ್ತು ತೃತೀಯ ಸ್ಥಾನ ಗಳಿಸಿದ ವಾಸುಕಿ ವೈಭವ್ ಅವರಿಗೆ ಬಿಗ್ ಬಾಸ್ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.