ರಣೋತ್ಸಾಹದಲ್ಲಿ ಚೈನಾ ವಸ್ತುಗಳನ್ನು ಬಹಿಷ್ಕರಿಸುವ ಮುನ್ನ…
ಮೇಲ್ನೋಟಕ್ಕೆ ತಿಕತಕ, ಅಪ್ಪೋ, ಟಣಟಣ ಎನ್ನುವಂತಹ ಪದಾರ್ಥಗಳನ್ನು ಬಹಿಷ್ಕರಿಸಿ ದೇಶಪ್ರೇಮದ ಕಿಚ್ಚಲ್ಲಿ ಎದೆ ಬಡಿದುಕೊಳ್ಳುವ ಮುನ್ನ ಚೈನಾದ ಅವಿಷ್ಕಾರಗಳ ಕುರಿತು ಸ್ವಲ್ಪೇ ಸ್ವಲ್ಪ ಅರಿಯಿರಿ.
ಬೆಳಿಗ್ಗೆ ಎದ್ದು ಕೂರುವ ಸಂಡಾಸದಿಂದ ಹಲ್ಲುಜ್ಜುವ ಬ್ರಶ್, ಪೇಪರ್, ಪೆನ್ನು, ಕುಲುಮೆ, ರೇಷ್ಮೆ, ಕನ್ನಡಕ ಹೀಗೆ ದಿನನಿತ್ಯ ಬಳಸುವ ಸಾವಿರಾರು ವಸ್ತುಗಳು ಚೈನಾದವರ ಆವಿಷ್ಕಾರಗಳು!
ನಾವು ಓದುವ ಭಾರತೀಯ ಇತಿಹಾಸವನ್ನು ಕಟ್ಟಿಕೊಟ್ಟಿರುವ ಹುಯೆನ್ ತ್ಸಾಂಗ್, ಯಿ ತ್ಸಿ, ಫಾಹಿಯಾನ್ ಮುಂತಾದವರೆಲ್ಲ ಚೀನಿಯರು!
ಬಳ್ಳಾರಿಯ ಕಸವನ್ನು ಚೈನಾ ರಸವಾಗಿಸಿದ್ದರಿಂದಲೇ ಭಾರತದ ಒಂದು ಓಟಿಗೆ ಎರಡು ಸಾವಿರ ರೂಪಾಯಿಗಳ ಬೆಲೆ ಬಂದದ್ದು!
ಇವೆಲ್ಲವನ್ನೂ ಬಹಿಷ್ಕರಿಸಲಾದೀತೆ!
ಇನ್ನು ಎಲ್ಲಾ ನಾವೇ ಉತ್ಪಾದಿಸುತ್ತೇವೆ ಎಂದು ಹೆಬ್ಬೆರಳಿನಿಂದ ಚಿಲ್ಲನೆ ರಕ್ತ ಹೊಮ್ಮಿಸಿ ಹಣೆಗಚ್ಚಿಕೊಂಡು ಪ್ರತಿಜ್ಞೆ ಮಾಡುವ ಮುನ್ನ ನಮ್ಮ ಸ್ವಾತಂತ್ರ್ಯದ ನಂತರದ ಉದ್ದಿಮೆಗಳ ಇತಿಹಾಸವನ್ನು ಗಮನಿಸೋಣ.
ಚೈನಾದ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಲಾಭಕರವಾಗಿ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುತ್ತಿದ್ದರೆ, ಇತ್ತ ಭಾರತದ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಬಿಳಿಯಾನೆ ಎಂದು ಮುಚ್ಚಿಹೋಗಿವೆ.
SEZ, ಉದ್ಯಮಿಗಳಿಗೆ ಸಹಾಯವಾಗಲು ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮಗಳು (KSSIDC ಥರ), ಬಡ್ಡಿ ರಹಿತ ಸಾಲ, ಸಬ್ಸಿಡಿ, ಉಚಿತ ನೀರು, ವಿದ್ಯುತ್ ಮುಂತಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಳೆದ ಎಪ್ಪತ್ತು ವರ್ಷಗಳಿಂದ ಭಾರತದ ಎಲ್ಲಾ ಸರ್ಕಾರಗಳೂ ಚೈನಾಕ್ಕಿಂತ ಹೆಚ್ಚಾಗಿ ನಮ್ಮ ಉದ್ಯಮಿಗಳಿಗೆ ಕೊಡುತ್ತಾ ಬಂದಿವೆ. ಆದರೆ ಭಾರತ ಏನಾಗಿದೆ? ಕೇವಲ ಹೊರಗುತ್ತಿಗೆಯ ಐಟಿ ಭಾರತದ ಜನಸಂಖ್ಯೆಯ ಎಷ್ಟು ಪ್ರಮಾಣಕ್ಕೆ ಕೆಲಸ ಕೊಟ್ಟಿದೆ? ನನ್ನದೇ ದಾವಣಗೆರೆಯ ಹತ್ತಿ ಗಿರಣಿಗಳು ಲೇಔಟ್ ಆಗಿವೆ. ಈಗ ಕೇವಲ ವಿದ್ಯೆ ಮಾರುವ ಊರಾಗಿದೆ ದಾವಣಗೆರೆ!
ಸೊಪ್ಪು, ತರಕಾರಿ ಬೆಳೆಯುತ್ತಿದ್ದ ನಗರಗಳ ಹೊರವಲಯದ ಜಮೀನುಗಳು ರಿಯಲ್ ಎಸ್ಟೇಟ್ ಸೈಟುಗಳಾಗಿ ಧಿಡೀರ್ ಶ್ರೀಮಂತರಾದ ಆ ರೈತರು, ಸೈಟು ಬ್ರೋಕರುಗಳೇ ಪರಿವರ್ತಿತಗೊಂಡಾದ ಜನನಾಯಕರು, ಮತ್ತು ರಿಯಲ್ ಎಸ್ಟೇಟ್ ಬಂಡವಾಳದ ಸಿನೆಮಾ ತಾರೆಯರಿಗೆ ಮೈ ಉಜ್ಜಲು ಚೀನಿಯರಂತೆ ಕಾಣುವ ಲಲನೆಯರೇ ಬೇಕು!
ಭಾರತದಲ್ಲಿ ಉದ್ಯಮಿಗಳಿಗೆ ಕೊಟ್ಟ ಅರ್ಧದಷ್ಟು ಸವಲತ್ತುಗಳನ್ನು ಚೈನಾ ತನ್ನ ಉದ್ಯಮಿಗಳಿಗೆ ಕೊಟ್ಟಿದ್ದರೆ ಚೈನಾ ಕಳೆದ ದಶಕದಲ್ಲೇ ದೊಡ್ಡಣ್ಣನಾಗುತ್ತಿತ್ತು.
ಭಾರತಕ್ಕಿಂತ ಬಡತನದಲ್ಲಿದ್ದು, ತಿನ್ನಲು ಅನ್ನವಿಲ್ಲದೆ ಹುಳುಹುಪ್ಪಡಿಗಳನ್ನು ತಿನ್ನುತ್ತಿದ್ದ ಚೈನಾ ಇಂದು ವಿಶ್ವದ ದೊಡ್ಡಣ್ಣನೆನಿಸಿಕೊಳ್ಳಲು ದಾಪುಗಾಲು ಹಾಕುತ್ತಿದೆ. ಚೈನಾದ ಸೆಮಿಕಂಡಕ್ಟರ್ ಚಿಪ್ಪಿಲ್ಲದಿದ್ದರೆ ನಮಗೆ ಚಿಪ್ಪೇ ಗತಿ! ಏಕೆಂದರೆ ಭಾರತದ ಸೆಮಿಕಂಡಕ್ಟರ್ ಉದ್ದಿಮೆ ಇನ್ನೂ ತೆವಳುತ್ತಲೇ ಇಲ್ಲ.
ಸಮಸ್ಯೆ ನೀವೆಂದುಕೊಂಡದ್ದಕ್ಕಿಂತ ಆಳವಾಗಿದೆ. ಎಷ್ಟು ಆಳವೆಂದರಿಯಲು ನಮಗೆ ಚೀನೀ ಉಪಕರಣವೇ ಬೇಕು, ಅಷ್ಟರಮಟ್ಟಿಗೆ!
ಕಳೆದ ಎಪ್ಪತ್ತು ವರ್ಷಗಳಿಂದ ಒಂದು ಗಡಿ ವಿವಾದವನ್ನು ಬಗೆಹರಿಸಿಕೊಳ್ಳದೆ ಮೆತ್ತಗೆ ಇದು ನಮಗೆ ಸೇರಿದ್ದು ಎಂದುಕೊಂಡು ಅಭಿವೃದ್ಧಿಗೆ ಕೈಹಾಕಿದ್ದುದೇ ಇದಕ್ಕೆಲ್ಲಾ ಕಾರಣ. ಈಗ ವಿವಾದಕ್ಕೀಡಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮನಮೋಹನ ಸಿಂಗ್ ಅವರ ಕಾಲದಲ್ಲಿ ಆರಂಭಿಸಿ, ಮೋದಿಯವರು ಅದನ್ನು ಮುಂದುವರಿಸಿ ಈಗ ಕುತ್ತಿಗೆಗೆ ಬಂದು ನಿಂತಿವೆ. ಎಷ್ಟರ ಮಟ್ಟಿಗೆಂದರೆ ಚೈನಾ ದಶಕಗಳಿಂದ ಅರುಣಾಚಲ ಪ್ರದೇಶ ತನ್ನದೇ ಎಂದರೂ ಒಂದು ಇತಿಶ್ರೀ ಹಾಡದಷ್ಟರ ಮಟ್ಟಿಗೆ! ಭಾರತ-ಚೈನಾದ ಗಡಿಗಳು ಅಷ್ಟರಮಟ್ಟಿಗೆ ಗೊಂದಲಮಯವಾಗಿವೆ! ಈ ಅನಿಶ್ಚಿತತೆಯಿಂದಲೇ LAC ಎಂದಿದೆಯೇ ಹೊರತು ನಿಶ್ಚಿತ ಗಡಿ ಎಂದಲ್ಲ.
ಹೌಡಿ ಮೋದಿ, ನಮಸ್ತೆ ಟ್ರಂಪ್, ಸೆಪರೇಟೆಡ್ ಬೈ ಇಂಡಿಯನ್ ಓಶನ್ ಯುನೈಟೆಡ್ ಬೈ ಇಂಡಿಯನ್ ಸಮೋಸ, ಬುಲೆಟ್ ಟ್ರೇನುಗಳಂತಹ ಕಾರ್ಯಕ್ರಮಗಳಿಂದ ಚಿಟಿಕೆ ಹೊಡೆದಂತೆ ಸಾಕಷ್ಟು ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಿರುವ ನಮ್ಮ ಶಾರ್ದೂಲ ಸಿಂಹ ಪ್ರಧಾನಿಗಳು ಜಿಂಗ್ಪಿನ್ನರಿಗೆ ಲುಂಗಿ ಉಡಿಸಿ ಟಪ್ಪಂಗುಚಿ ಕುಣಿಸಿ ಗಡಿ ವಿವಾದಕ್ಕೆ ಒಂದು ತಿಲಾಂಜಲಿ ಹಾಡುವಂತೆ ಒತ್ತಾಯಿಸೋಣ. All it takes is a Tappaanguchi lungi dance!
In the meanwhile, ನೀವು ನಾವೆಲ್ಲಾ ಮಾಡಬೇಕಾದ ತುರ್ತಿನ ಕೆಲಸವೆಂದರೆ ಚೀನೀಯರಂತೆ ಕಾಣುವ ನಮ್ಮ ಈಶಾನ್ಯ ಗಡಿಯೊಳಗಿರುವವರನ್ನು ಸರ್ಕಾರವೂ ಸೇರಿದಂತೆ ಮನುಷ್ಯರಾಗಿ ನೋಡೋಣ. ಇಲ್ಲದಿದ್ದರೆ ಅವರೂ ನಾವು ಚೈನಾಕ್ಕೆ ಸೇರಿದವರು ಎಂದೆನ್ನುವುದು ನಿಶ್ಚಿತ!
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ