ಸಂಕ್ರಾತಿ ನಂತರ ‘ಬ್ಯಾಡ್ ಮ್ಯಾನರ್ಸ್’ ಶೂಟಿಂಗ್ ಮಂಡ್ಯದಲ್ಲಿ ಪ್ರಾರಂಭ
ದುನಿಯಾ ಸೂರಿಯವರು ಈ ಬಾರಿ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ರನ್ನು ಹಾಕಿಕೊಂಡು ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಅನೌನ್ಸ್ ಆಗಿನಿಂದಲೂ ಅಭಿಷೇಕ್ ತುಂಬ ವರ್ಕೌಟ್ ಮಾಡುತಿದ್ದಾರೆ. ಕಳೆದ 6 ತಿಂಗಳಿಂದ ವರ್ಕೌಟ್ ಮಾಡಿ ದೇಹದ ತೂಕ ಇಳಿಸಿಕೊಂಡಿದ್ದಾರೆ. “ಕಳೆದ ವರ್ಷ ಜನವರಿಯಿಂದ ನಾವು ಶೂಟಿಂಗ್ ಸೆಟ್ ಗೆ ಹೋಗಿಲ್ಲ. ಒಂದು ವರ್ಷದ ನಂತರ, ಸಂಕ್ರಾಂತಿ ನಂತರ ಶೂಟಿಂಗ್ ಪ್ರಾರಂಭಿಸುತ್ತಿದ್ದೇವೆ.
ಚಿತ್ರದ ಚಿತ್ರೀಕರಣ ಮಂಡ್ಯ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಡಲು ತೀರ್ಮಾನಿಸಿದ್ದೇವೆ. ಮಂಡ್ಯದಲ್ಲಿರುವ ಕೆಲವು ಹಾಸ್ಟೆಲ್, ಬಿಲ್ಡಿಂಗ್ ಗಳು ನನ್ನ ಕಥೆಗೆ ಹೊಂದಿಕೊಂಡು ಹೋಗುತ್ತದೆ. ಅದರಿಂದ ಅಲ್ಲಿ ಶೂಟಿಂಗ್ ಮಾಡಲು ತೀರ್ಮಾನಿಸಿದೆ. ಅದು ಬಿಟ್ಟು ಬೇರೇನೂ ಉದ್ದೇಶವಿಲ್ಲ” ಎಂದಿದ್ದಾರೆ ನಿರ್ದೇಶಕ ದುನಿಯಾ ಸೂರಿ. ಈ ಚಿತ್ರದಲ್ಲಿ ಅಭಿಷೇಕ್ ಜೊತೆ ಗ್ಯಾಂಗ್ ಹುಡುಗರಿರುತ್ತಾರೆ. ಅದಕ್ಕಾಗಿ ಸಾಕಷ್ಟು ಕಲಾವಿದರನ್ನು ಆಯ್ಕೆ ಮಾಡುತ್ತಿದ್ದೇನೆ. ಶೇಖರ್ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸದ್ಯದಲ್ಲೇ ಎಲ್ಲ ವಿವರಗಳನ್ನು ತಿಳಿಸುವುದಾಗಿ ಹೇಳಿದ್ದಾರೆ ದುನಿಯಾ ಸೂರಿ.