ಕನ್ನಡಕ್ಕೂ ರಿಮೇಕ್ ಆಗ್ತಿದೆಯಂತೆ ‘ಅರ್ಜುನ್ ರೆಡ್ಡಿ’

Published on

426 Views

ಟಾಲಿವುಡ್​ನ ಬ್ಲಾಕ್​ ಬಸ್ಟರ್ ಮೂವೀ ‘ಅರ್ಜುನ್ ರೆಡ್ಡಿ’ ಕನ್ನಡಕ್ಕೆ ರಿಮೇಕ್ ಆಗಲಿದೆಯಂತೆ. ಕಳೆದ ವಾರ ಬಿಡುಗಡೆಯಾಗಿರುವ ಅರ್ಜುನ್ ರೆಡ್ಡಿ ಹಿಂದಿ ರಿಮೇಕ್ ‘ಕಬೀರ್ ಸಿಂಗ್’ ಯಶಸ್ಸು ಗಳಿಸಿದೆ. ಮೊದಲ ವಾರವೇ ₹100 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಬಾಲಿವುಡ್​ಗೆ ರಿಮೇಕ್ ಆಗಿರುವ ಈ ಚಿತ್ರವನ್ನು ಕನ್ನಡಕ್ಕೆ ತರುವ ಪ್ಲ್ಯಾನ್ ಇದೆಯಂತೆ.

ಹಾಗೇ ನೋಡಿದ್ರೆ ಈ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗಲಿದೆ, ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್​ ಯಶ್ ಇಲ್ಲವೇ ಡಾಲಿ ಧನಂಜಯ್ ನಟಿಸಲಿದ್ದಾರೆ ಅನ್ನೋ ಮಾತುಗಳು ಕಳೆದ ವರ್ಷವೇ ಕೇಳಿ ಬಂದಿದ್ದವು. ನಿರ್ಮಾಪಕ ರಾಕ್​ ಲೈನ್​ ವೆಂಕಟೇಶ್ ಈ ಚಿತ್ರದ ರಿಮೇಕ್ ರೈಟ್ಸ್​ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ,ಈ ವಿಚಾರ ಮತ್ತೆ ಸುದ್ದಿ ಮಾಡಲಿಲ್ಲ. ಈಗ ಕೆಲವು‌ ಮೂಲಗಳಿಂದ ಮತ್ತೊಮ್ಮೆ ಅರ್ಜುನ್ ರೆಡ್ಡಿಯ ರಿಮೇಕ್ ಮಾಡುವ ಮಾತುಗಳು ಸ್ಯಾಂಡಲ್ವುಡ್ ನಲ್ಲಿ ಜೋರಾಗಿಯೇ ಹರಿದಾಡುತ್ತಿವೆ. ನಿರ್ದೇಶಕ, ನಿರ್ಮಾಪಕ
ಎಸ್​​.ನಾರಾಯಣ ಅವರು ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರಂತೆ. ಆದರೆ,ಕನ್ನಡದ ರಿಮೇಕ್​ನಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ರಿವೀಲ್ ಆಗಿಲ್ಲ.

ಬಾಲಿವುಡ್ ಮಾತ್ರವಲ್ಲದೇ ಈಗ ತಮಿಳಿನಲ್ಲೂ ಆದಿತ್ಯಾ ವರ್ಮಾ ಹೆಸರಿನಲ್ಲಿ ಈ ಚಿತ್ರ ರಿಮೇಕ್ ಆಗುತ್ತಿದೆ.

ಸಂದೀಪ್​ ರೆಡ್ಡಿ ನಿರ್ದೇಶನದ ತೆಲುಗು ಚಿತ್ರ ‘ಅರ್ಜುನ್​ ರೆಡ್ಡಿ’ ಯಲ್ಲಿ ವಿಜಯ್ ದೇವರಕೊಂಡ ಹಾಗೂ ಶಾಲಿನಿ ಪಾಂಡೆ ನಟಿಸಿದ್ದರು. ಈ ಚಿತ್ರದ ಗೆಲುವಿನಿಂದ ವಿಜಯ್ ದೇವರಕೊಂಡಗೆ ದೊಡ್ಡ ಬ್ರೇಕ್ ದೊರಕಿತ್ತು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com