ಜಾಕ್ ಮಂಜು ನಿರ್ಮಾಣದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ – ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ ‘ಪಾದರಾಯ’ ಚಿತ್ರ
ಚಕ್ರವರ್ತಿ ಚಂದ್ರಚೂಡ್ ಮತ್ತೆ ನಿರ್ದೇಶನ ಟ್ರ್ಯಾಕ್ ಗೆ ಮರಳಿದ್ದಾರೆ. ಹನುಮ ಜಯಂತಿಯಂದೇ ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಟೈಟಲ್ ಅನಾವರಣ ಮಾಡಿದ್ದಾರೆ. ಚಿತ್ರಕ್ಕೆ ‘ಪಾದರಾಯ’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ‘ಮೈನಾ’. ‘ಸಂಜು ವೆಡ್ಸ್ ಗೀತಾ’ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ.
ನೈಜ ಘಟನೆ ಆಧರಿಸಿದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಐದು ಭಾಷೆಯಲ್ಲಿ ನಿರ್ಮಾಣವಾಗಿ ಬಿಡುಗಡೆಯಾಗುತ್ತಿದೆ. ನಾಗಶೇಖರ್ ನಾಯಕ ನಟನಾಗಿ ನಟಿಸುವುದರ ಜೊತೆಗೆ ಚಿತ್ರಕ್ಕೆ ಸಹ ನಿರ್ಮಾಪಕ ಕೂಡ ಆಗಿದ್ದಾರೆ.
‘ಪಾದರಾಯ’ ಎಂದರೇ ಹನುಮಂತ. ಅಂಜನಾದ್ರಿ ಸುತ್ತಮುತ್ತ ನಡೆಯುವ ಕಥೆ ಚಿತ್ರಲ್ಲಿದೆ. 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ. ಈ ಘಟನೆ ಆರು ರಾಜ್ಯಕ್ಕೆ ಸಂಬಂಧಿಸಿದ್ದು, ಯೂನಿವರ್ಸಲ್ ಸಬ್ಜೆಕ್ಟ್ ಆದ್ರಿಂದ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ. ಶಾಲಿನಿ ಆರ್ಟ್ಸ್ ಬ್ಯಾನರ್ ನಡಿ ಜಾಕ್ ಮಂಜು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದೇವೆ ಜನವರಿಯಲ್ಲಿ ಚಿತ್ರೀಕರಣ ಆರಂಭಿಸಲಿದ್ದೇವೆ. ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಹಂಚಿಕೊಳ್ಳೋದಾಗಿ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ತಿಳಿಸಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ತಮಿಳು ಚಿತ್ರರಂಗದ ಹೆಸರಾಂತ ಸಂಕಲನಕಾರ ಆಂಟೋನಿ ಚಿತ್ರದ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ. ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.