ಎಂಎಂಸಿಹೆಚ್ ಚಿತ್ರದಲ್ಲಿ ಇಂಡಿಯನ್ ರೇಲ್ವೇ ಜಿ.ಜಿ.ಎಂ. ಅನೂಪ್ ದಯಾನಂದ್ ಹಾಡು
ಎಂಎಂಸಿಹೆಚ್ ಚಿತ್ರದಲ್ಲಿ
ಇಂಡಿಯನ್ ರೇಲ್ವೇ ಜಿ.ಜಿ.ಎಂ. ಅನೂಪ್ ದಯಾನಂದ್ ಹಾಡು
ದಶಕದ ನಂತರ ಮುಸ್ಸಂಜೆ ಮಾತು ಚಿತ್ರದ ಯಶಸ್ವೀ ಜೋಡಿ ನಿರ್ದೇಶಕ ಮುಸ್ಸಂಜೆ ಮಹೇಶ್ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಮತ್ತೊಂದು ಮ್ಯೂಸಿಕಲ್ ಹಿಟ್ ಚಿತ್ರವನ್ನು ಕೊಡಲು ಅಣಿಯಾಗಿದ್ದಾರೆ. ಎಂಎಂಸಿಹೆಚ್ ಎಂಬ ವಿನೂತನ ಹೆಸರುಳ್ಳ ಈ ಚಿತ್ರವನ್ನು ಎಸ್. ಪುರುಷೋತ್ತಮ್, ಜಾನಕಿರಾಮ್ ಹಾಗೂ ಅರವಿಂದ್ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ರಜನಿಕಾಂತ್ ಕೆಲಸ ಮಾಡುತ್ತಿದ್ದಾರೆ. ಇದೇ ಮೊದಲಬಾರಿಗೆ ಕನ್ನಡ ಚಿತ್ರರಂಗದ ನಾಲ್ವರು ಹಿರಿಯ ಕಲಾವಿದೆಯರ ಪುತ್ರಿಯರು ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಈ ಚಿತ್ರದಲ್ಲಿ ಬರುವ ಪ್ಯಾಥೋ ಸಾಂಗ್ ಒಂದನ್ನು ಇಂಡಿಯನ್ ರೈಲ್ವೇಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ದಯಾನಂದ್ ಅವರು ಹಾಡಿದ್ದಾರೆ. ರಾಜಾಜಿನಗರದಲ್ಲಿನ ಆದರ್ಶ ಸ್ಟುಡಿಯೋದಲ್ಲಿ ಈ ವಿಶೇಷ ಹಾಡಿನ ರೆಕಾರ್ಡಿಂಗ್ ಕಾರ್ಯ ನಡೆಯಿತು. ಸಾಹಿತಿ ಗೌಸ್ ಪೀರ್ ರಚಿಸಿದ “ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ” ಎಂಬ ಶೋಕಗೀತೆಗೆ ಇದೇ ಮೊದಲ ಬಾರಿಗೆ ದಯಾನಂದ್ ಅವರು ದನಿಯಾಗಿದ್ದಾರೆ. ಈವರೆಗೆ ಹಲವಾರು ಭಾವಗೀತೆಗಳು ಭಕ್ತಿಗೀತೆಗೆಳನ್ನು ಹಾಡಿರುವ ಇವರು ಚಲನಚಿತ್ರಕ್ಕೆ ಹಾಡಿರುವುದು ಫಸ್ಟ್ ಟೈಮ್.
ಹಿರಿಯನಟಿ ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾರಾಜ್, ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್, ಸುಧಾ ಬೆಳವಾಡಿ ಅವರ ಪುತ್ರಿ ಸಂಯುಕ್ತಾ ಹೊರನಾಡು ಹಾಗೂ ಸುಮಿತ್ರಮ್ಮ ಅವರ ಪುತ್ರಿ ನಕ್ಷತ್ರ ಎಂಎಂಸಿಹೆಚ್ ಚಿತ್ರದ ನಾಲ್ಕು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರ ಜೊತೆ ನಟಿ ರಾಗಿಣಿ ದ್ವಿವೇದಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಶ್ರೇಯಾ ಘೋಷಾಲ್, ವಿಜಯ ಪ್ರಕಾಶ್‍ರಂಥ ಗಾಯಕರು ಹಾಡಿದ್ದಾರೆ.