“ಆ ಒಂದು ದಿನ”
“ಆ ಒಂದು ದಿನ”
ಒಂದು ಸಿನಿಮಾ ನಿರ್ಮಾಣ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ಇಂತಹ ಸಾಹಸವನ್ನು ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಒಬ್ಬರು ಮಾಡಿದ್ದಾರೆ. ಮೂಲತಃ ಕೃಷಿಕರಾಗಿದ್ದ ರವೀಂದ್ರ ಗೌಡ ಪಾಟೀಲ್ ‘ಆ ಒಂದು ದಿನ’ ಎಂಬ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ದೇಶಕ್ಕೆ ಏನಾದರೂ ಮಾಡಬೇಕು ಎಂಬ ಆಸೆ ಹೊಂದಿದ್ದ ಇವರು ಒಂದು ಸಿನಿಮಾ ಮಾಡಿ ಅದರ ಮೂಲಕ ಒಂದು ಒಳ್ಳೆಯ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆ ಹಾಳಾಗಿದೆ, ಪ್ರಜಾಪ್ರಭುತ್ವವನ್ನು ಪ್ರಜೆಗಳೆ ಸರಿ ಮಾಡಬೇಕು ಎನ್ನುವ ಇವರು ತಮ್ಮ ‘ಆ ಒಂದು ದಿನ’ ಸಿನಿಮಾ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ.
ಇದೇ ಫೆಬ್ರವರಿ 2 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಒಂದು ಹಳ್ಳಿ, ಆ ಹಳ್ಳಿಯಲ್ಲಿ ನಡೆಯುವ ಚುನಾವಣೆಯ ಭರಾಟೆ. ಅಲ್ಲಿನ ಗೌಡರ ನಡುವೆ ನಡೆಯುವ ಜಿದ್ದಾ ಜಿದ್ದಿ ಸ್ಪರ್ಧೆ. ಹಳ್ಳಿಯಲ್ಲಿರುವ ಎರಡು ಬಣಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು ಏನೆಲ್ಲ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ ಎನ್ನುವುದೇ ಚಿತ್ರದ ತಿರುಳು. ಇವೆಲ್ಲವೂ ಚಿತ್ರದ ಕಥೆಯಲ್ಲಿ ಅಡಕವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹದೊಂದು ಸಿನಿಮಾ ರಿಲೀಸ್ ಆಗುತ್ತಿರುವುದು, ಜನರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೋ ಗೊತ್ತಿಲ್ಲ. ಆದ್ರೆ, ಈ ಚಿತ್ರದಿಂದ ಜನರಲ್ಲಿ ರಾಜಕೀಯದ ಬಗ್ಗೆ ಹೊಸ ಭಾವನೆ ಮೂಡಬೇಕು ಎನ್ನುವುದು ಚಿತ್ರತಂಡದ ಆಶಯ.
ಧಾರವಾಡ ಮೂಲದ ಬಾಂಬೆಯಲ್ಲಿ ಡಾನ್ಸರ್ ಆಗಿರುವ ಸಿಮ್ರಾನ್ ಚಿತ್ರದ ನಾಯಕಿ. ದ್ರಾಕ್ಷಿ ಬೆಳೆಗಾರ ರವೀಂದ್ರಗೌಡ ಎನ್.ಪಾಟೀಲ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಎಲ್ಲ ಹೊಸ ಕಲಾವಿದರೇ ಅಭಿನಯಿಸಿದ್ದಾರೆ. ನಿರ್ದೇಶಕ ಸಂಜಯ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಶ್ರೀಹರ್ಷ ಸಂಗಿತ. ಸಾಮಾಜಿಕ ಅರಿವು ಮೂಡಿಸುವಂಥ ಒಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದು, ಇನ್ನುಳಿದಂತೆ ಎರಡು ಐಟಂ ಹಾಡು ಚಿತ್ರದಲ್ಲಿದೆ. ದೇಶದ ಅಭಿವೃದ್ಧಿಗೆ ಬದಲಾವಣೆ ಮುಖ್ಯ ಎನ್ನುವ ಕಾರಣದಿಂದ ಈ ಚಿತ್ರವನ್ನು ಅವರು ಮಾಡಿದ್ದಾರೆ. ‘ಆ ಒಂದು ದಿನ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.