ಹೊಸಬರ ‘ವಿಚಾರಣೆ’ ಚಿತ್ರಕ್ಕೆ ಅದ್ಧೂರಿ ಮುಹೂರ್ತ ಸಮಾರಂಭ

Published on

347 Views

ಕನ್ನಡದಲ್ಲಿ ಈಗ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಿದೆ. ಹೊಸ ಬಗೆಯ ಸಿನಿಮಾಗಳು ಕೂಡ ಸೆಟ್ಟೇರುತ್ತಿವೆ. ಆ ಸಾಲಿಗೆ ‘ವಿಚಾರಣೆ’ ಎಂಬ ಚಿತ್ರವೂ ಸೇರಿದೆ. ಹೌದು,
ಡಿಸೆಂಬರ್ 2 ರಂದು ಬನ್ನೇರಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿತು.
ಯಶ ಫಿಲಂಸ್ ಬ್ಯಾನರ್ ನಡಿ ಈ ಚಿತ್ರವನ್ನು ಆರ್. ಭಾಗ್ಯ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೂ ಮೊದಲು ನಿರ್ಮಾಪಕಿ ಭಾಗ್ಯ ಅವರು, ‘ಪಟ್ಟಾಭಿಷೇಕ’, ‘ಬೆಲ್’ ಮತ್ತು ‘ ಎಫ್ ಐ ಆರ್’ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಇನ್ನು ಈ ಚಿತ್ರವನ್ನು ಎನ್. ಅಕುಲ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಮೂಲತಃ ನೃತ್ಯ ನಿರ್ದೇಶಕರು. ಈ ಚಿತ್ರದ ಮೂಲಕ ಅವರು ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ನಿರ್ದೇಶಕ ಅಕುಲ್ ಅವರು ಇದಕ್ಕೂ ಮೊದಲು160 ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಅನುಭವದ ಮೇಲೆ ‘ವಿಚಾರಣೆ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ವಿಚಾರಣೆ ಸಿನಿಮಾ ಕುರಿತು ಹೇಳುವ ನಿರ್ದೇಶಕ ಅಕುಲ್, ‘ ಒಂದು ಘಟನೆಯಲ್ಲಿ ಅಮಾಯಕನೊಬ್ಬ ಪೊಲೀಸರ ಕೈ ಗೆ ಸಿಕ್ಕಿ ಬೀಳುತ್ತಾನೆ. ಆ ಅಮಾಯಕ ಯಾವುದೇ ತಪ್ಪು ಮಾಡದಿದ್ದರೂ, ಪೋಲೀಸರಿಂದ ಚಿತ್ರಹಿಂಸೆ ಅನುಭವಿಸುತ್ತಾನೆ. ಅವನು ತಪ್ಪು ಮಾಡಿದ್ದು ಏನು? ಅನ್ನೋದು ಸಸ್ಪೆನ್ಸ್. ಜೊತೆಗೆ ಆ ಅಮಾಯಕನನ್ನು ಮದುವೆಯಾದ ಹುಡುಗಿ, ಈ ಘಟನೆಯಿಂದ ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾಳೆ. ಕೊನೆಗೆ ಆ ಹುಡುಗ ಪೊಲೀಸರ ಕೈಯಿಂದಹೊರ ಬರುತ್ತಾನಾ ಇಲ್ಲವಾ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ.

ಚಿತ್ರದಲ್ಲಿ ಪ್ರೀತಿ, ದೌರ್ಜನ್ಯ, ಎಮೋಷನಲ್ ಅಂಶಗಳೂ ಇವೆ. ಇನ್ನು ಇದರೊಂದಿಗೆ ಚಿತ್ರದಲ್ಲಿ ಕಾಮಿಡಿ ಹಾಗು ಸೆಂಟಿಮೆಂಟ್ ಕೂಡ ಇದೆ. ನಾಲ್ಕು ಭರ್ಜರಿ ಫೈಟ್ಸ್ ಮತ್ತು ಮೂರು ಹಾಡುಗಳಿವೆ. ಕನ್ನಡದಲ್ಲಿ ಈಗ ತೆರೆಗೆ ಬರುತ್ತಿರುವ ವಿಭಿನ್ನ ಕಥಾವಸ್ತು ಇರುವ ಸಿನಿಮಾಗಳ ಸಾಲಿಗೆ ಈ ಸಿನಿಮಾದ ಕಥೆಯು ಇದೆ ಎಂಬುದು ನಿರ್ದೇಶಕರ ಮಾತು.
ಚಿತ್ರಕ್ಕೆ ಮಡೆನೂರು ಮನು ಹೀರೋ. ಜಾನು ನಾಯಕಿ. ಇವರಿಗೆ ಇದು ಮೊದಲ ಅನುಭವ. ಉಳಿದಂತೆ ಚಿತ್ರದಲ್ಲಿ ನಾಗೇಂದ್ರ ಅರಸ್, ಪ್ರಮೋದ್ ಶೆಟ್ಟಿ, ಆದಿ ಕೇಶವ್, ಮಹೇಶ್ ಇತರರು ಇದ್ದಾರೆ.
ಚಿತ್ರಕ್ಕೆ ಜಿ.ವಿ.ರಮೇಶ್ ಅವರ ಛಾಯಾಗ್ರಹಣವಿದೆ. ಸತೀಶ್ ಬಾಬು ಅವರು ಸಂಗೀತ ನೀಡುತ್ತಿದ್ದಾರೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com