ಪ್ರೀತಿಯ ಅಪ್ಪುವಿಗೊಂದು ಆತ್ಮೀಯ ವಿದಾಯ
ಅಪ್ಪು,….
ಆಳಬೇಕಿತ್ತಲ್ಲವೆ ಇನ್ನಷ್ಟು ದಿನ? ಯಾಕೆ ಇಷ್ಟು ಬೇಗ ರಂಗದ ರಾಜಾಸನಕ್ಕೆ ವಿದಾಯ ಹೇಳಿ ದೂರ ಸಾಗಿದಿರಿ?
ಅಳಬೇಕೆಂದರೆ ಅಳುವೂ ಬರುವುದಿಲ್ಲ, ಕಣ್ಣೀರು ತನ್ನಷ್ಟಕ್ಕೇ ಸುರಿಯುವುದಂತೂ ನಿಲ್ಲುತ್ತಲೇ ಇಲ್ಲ.
ಯಾಕಿಷ್ಟು ಕಾಡುತ್ತಿರುವೆ ಪುನೀತ!
16 ಮಾಸಗಳ ಕಂದನಾಗಿದ್ದಾಗಲೇ, ಪೌಡರ್ ಹಚ್ಚುವ ಕಾಲದಲ್ಲೇ ಬಣ್ಣ ಹಚ್ಚಿದವನಂತೆ ನೀನು. 16 ವರುಷ ದಾಟುವಾಗಲೇ ಕನ್ನಡದ ಕಂದನಾಗಿ ಬೆಳೆದು ಬಂದಾಗಿದೆ. ನಿಮ್ಮ ತಂದೆ ಅಭಿಮಾನಿಗಳಿಗೇ ದೇವರು,. ಅವರಿಗೋ ಅಭಿಮಾನಿಗಳೇ ದೇವರು,. ತಂದೆ ಹಾಕಿಕೊಟ್ಟ ಹೆಜ್ಜೆಯನ್ನು ಚಾಚೂತಪ್ಪದೆ ಪಾಲಿಸುತ್ತ ಬಂದು ಈಗ ಈ ಅಭಿಮಾನಿ ದೇವರುಗಳ ಕಣ್ಣೆದುರೇ ಕಿರಿಯ ಕಾಲದಲ್ಲೇ ತಂದೆ ಸೇರಿದ ಸ್ಥಾನವನ್ನು ಸೇರಲು ಸಾಗಿದಿರಲ್ಲವೆ! ಇದು ನ್ಯಾಯವೆ!ಹಾ!
*ಅಜಾತಶತ್ರು ನೀವು!!*
ನಿಮ್ಮನ್ನು ಯಾರೂ ದ್ವೇಷಿಸಿದವರೇ ಇಲ್ಲ ಲೋಹಿತಾಶ್ವ, ಅದೆಷ್ಟೋ ಕುಟುಂಬ, ಅದೆಷ್ಟೋ ವೃದ್ಧರು, ಅದೆಷ್ಟೋ ಅನಾಥ ಮಕ್ಕಳು, ಅದೆಷ್ಟೋ ಬಡ ಕಲಾವಿದರು, ನಿನ್ನ ಕಂಗಳಿಂದಲೇ ಬೆಳಕು ಕಂಡವರು ಇಂದು ಎತ್ತರಕ್ಕೆ ಏರಿದ್ದಾರೆ ಪುನೀತ, ಆದರೆ ಆ ಸಂತೋಷವನ್ನು, ಆ ಧನ್ಯತೆಯನ್ನು ನೀವಿಲ್ಲದೆ ಇನ್ನು ಯಾರಲ್ಲಿ ಹೇಳಿಕೊಳ್ಳಲಿ ಹೇಳಿ?
*ಮುಗ್ಧತೆಗಿನ್ನೆಲ್ಲಿಯ ಮಗುವಿನ ‘ಅಪ್ಪು’ಗೆ*…..
ಅಣ್ಣ ಶಿವಣ್ಣ ಮಗುವಿನಂತಹ ಮನಸ್ಸಿನ ಜೀವ. ಇಬ್ಬರು ತಮ್ಮಂದಿರು, ಅಮ್ಮ ಅಪ್ಪ ಇಷ್ಟನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಜೀವ ಅದು,. ಮೊನ್ನೆ ತಾನೇ ಅಮ್ಮನ ನೆನಪಾಗಿ ಕಣ್ಣೀರು ಸುರಿಸಿದ್ದ ಶಿವಣ್ಣನಿಗೆ ಮತ್ತೆ ಕಣ್ಣೀರ ಕೋಡಿ ? ಇದು ನ್ಯಾಯವೆ?
*ನೀವೇ ದೇವರು, ನಾವು ಪುನೀತ*
ದೇವರನ್ನು ದೂರಲಾರೆ ಪುನೀತ. ಯಾಕೆ ಗೊತ್ತಾ? ನಮಗ್ಯಾರಿಗೂ ದೇವರು ಬರೆದಿದ್ದನ್ನು ತಿದ್ದುವ ಶಕ್ತಿಯಿಲ್ಲ. ಅವನೇನೋ ಕಳಿಸಿದ್ದ. ಇಂತಿಷ್ಟು ಜವಾಬ್ದಾರಿ ವಹಿಸಿದ್ದೇನೆ ಮಗನೆ ಮುಗಿಸಿ ಬಾ ಎಂದು. ಇಲ್ಲಿ ನೀವು ಮಾಡಿದ ದೈವಸಾಕ್ಷಿಯ ಸತ್ಕರ್ಮಗಳು ಅವನಿಗೇ ಸಾಕೆನ್ನಿಸಿತೋ ಏನೋ. ಕರೆಸಿಕೊಂಡೇ ಬಿಟ್ಟ,. ನಮ್ಮಿಂದ ದೂರ. ಬಹು ದೂರ!
ಆದರೂ, ನೀವು ಯಾರಿಗೂ ಅನ್ಯಾಯ ಮಾಡಲಿಲ್ಲ. ಯಾರನ್ನೂ ದೂರಲಿಲ್ಲ, ಯಾರನ್ನೂ ದ್ವೇಷಿಸಲಿಲ್ಲ, ಯಾರಿಂದಲೂ ತೆಗಳಿಸಿಕೊಳ್ಳಲಿಲ್ಲ. ಆ ನಿಮ್ಮ ಬದುಕಿನ ಸಾಧನೆ ಇವತ್ತು ನಮ್ಮ ಕಣ್ಣಾಲಿಯನ್ನು ತೇವವಾಗಿಸುತ್ತಿದೆ! ಬದುಕಿನ ಬವಣೆಯಲ್ಲಿ, ಅದೂ ಇಂತಹ ಸಿನಿಮಾ ರಂಗದ ಕೂಪದಲ್ಲಿ ಮಿಸುಕಾಡಿ ಬರುವುದೇ ಸಾಹಸ. ಅದರ ನಡುವೆ ಪ್ರತಿಬಾರಿಯೂ ಕನ್ನಡಕ್ಕೇ ತನ್ನನ್ನು ಮೀಸಲಿಟ್ಟು, ಪರಭಾಷೆಗಳ ಆಹ್ವಾನಕ್ಕೂ ಸೊಪ್ಪು ಹಾಕದೆ, ತಂದೆಯಂತೆ ಕನ್ನದವೇ ಸತ್ಯ, ಕನ್ನಡವೇ ನಿತ್ಯ ಎಂದು ಕನ್ನಡದ ಹಿರಿಮೆಯನ್ನು ಎತ್ತರಕ್ಕೆ ಏರಿಸಿ ಆ ಬಾವುಟದಲ್ಲೇ ಶಾಶ್ವತ ಕುಂಕುಮವಾದ ನಿಮ್ಮ ನೆನಪು ಅಜರಾಮರ ಪುನೀತ.
ಬದುಕಿ ಬನ್ನಿ ಎಂದು ಪ್ರಾರ್ಥಿಸುವ ಅವಕಾಶವೂ ನೀಡದೆ ತೆರಳಿದ್ದೀರಿ. ಕನ್ನಡ ಮಣ್ಣಿನ ಪುಣ್ಯದ ಫಲಕ್ಕೆ, ನಮ್ಮ ಬದುಕಿನ ಪುಣ್ಯದ ಫಲವೂ ಸೇರಲಿ. ನಿಮ್ಮಂತಹ ಇನ್ನೊಬ್ಬ ಮಹಾಚೇತನ ಈ ಕನ್ನಡನಾಡಿನಲ್ಲೇ ಜನಿಸಿ ಬರಲಿ ಎಂದು ಆತ್ಮಕಂಬನಿಯಿಂದ ನಿಮ್ಮೆಡೆಗಿನ ಪುಟ್ಟ ನುಡಿನಮನಕ್ಕೊಂದು ಅಂತ್ಯವಿಲ್ಲದ ಪೂರ್ಣವಿರಾಮ….