ರಂಗ ಬೆಳ್ಳಿ ಕಿರಣಕ್ಕೆ 25ನೇ ವಸಂತ… | ಹ್ಯಾಪಿ ಬರ್ತ್ ಡೇ ನಯನ ಸೂಡ
ಹೌದು
ರಂಗಭೂಮಿಯಲ್ಲಿ ಬೆಳ್ಳಿ ಕಿರಣವಾಗಿ ಹೆಜ್ಜೆ ಇಟ್ಟ ನಯನ ರವರಿಗೆ ಬೆಳ್ಳಿ ಮಹೋತ್ಸವದ ಸಂಭ್ರಮ.
ಇದೇ ಜುಲೈ 31 ಕ್ಕೆ ನಯನ.ಜೆ.ಸೂಡ ರಂಗಪಯಣ ಕಟ್ಟಿ 12 ವರ್ಷ ಪೂರೈಸುತ್ತದೆ. ಇದಕ್ಕಿಂತ ಒಂದು ಕೈ ಮೇಲಿನ ಸಂಭ್ರಮ ನಯನರ ರಂಗಭೂಮಿಯ ಪಾದಾರ್ಪಣೆಗೆ ಕೂಡ 25 ವಸಂತವಾಗುತ್ತದೆ. ಜೊತೆಗೆ ಜುಲೈ 31 ನಯನ ರವರ ಜನ್ಮ ದಿನ.
ದಕ್ಷಿಣ ಕನ್ನಡದ “ಹೆಬ್ರಿ” ಯಲ್ಲಿ ಜನಿಸಿದ ನಯನ ಬೆಂಗಳೂರಿನ ಬಿ.ನಾರಾಯಣ ಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತನ್ನ 6 ನೇ ವಯಸ್ಸಿನಲ್ಲಿ 2ನೇ ತರಗತಿಯಾಗಿದ್ದಾಗ ರಂಗ ಗುರುಗಳಾದ ಶ್ರೀ ಯುತ ಸಿ. ಲಕ್ಷ್ಮಣ್ ರವರು
ಬಾರೆ ಪುಟ್ಟಿ ನಾಟ್ಕ ಮಾಡ್ತಿಯೇನೆ ಎಂದು ಕೇಳಿದ ಮಾತ್ರಕ್ಕೆ ಚಂಗನೆ ಹಾರಿ ರಂಗಭೂಮಿಗೆ ಕಾಲಿಟ್ಟರು. ಹೀಗೆ ಪುಟ್ಟಿಯಾಗಿ, ಪುಟ್ಟ ಹೆಜ್ಜೆಯೊಂದಿಗೆ ಕಾಲಿಟ್ಟ ನಯನ ರವರು ಇಂದು ರಂಗಭೂಮಿಯಲ್ಲಿ 25 ವಸಂತ ಪೂರೈಸಿದ್ದಾರೆ. ಸದಾ ಕಾಲ ರಂಗಭೂಮಿಯ ತುಡಿತ ಹೊಂದಿದ್ದ ನಯನ.ಜೆ.ಸೂಡ “ನನ್ನ ಗೋಪಾಲ” ನಾಟಕದಲ್ಲಿ ಬಾಲ್ಯ ನಟ/ನಟಿ ಯಾಗಿ ಕಾಣಿಸಿಕೊಂಡು “ರಂಗ ಕಹಳೆ” ತಂಡದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿ ನಂತರ ಶ್ರೀ ಯುತ ಆಂಜನೇಯ ಅವರು ನಿರ್ದೇಶಿಸಿದ “ಕೆಂಪೇಗೌಡರ ಜೀವನಾಧಾರಿತ ನಾಟಕ” ದಲ್ಲಿ ಸೊಸೆ ಲಕ್ಷ್ಮೀ ಪಾತ್ರದಲ್ಲಿ ಗುರುತಿಸಿಕೊಂಡು ನಂತರ ತನ್ನದೇ ಆದ “ರಂಗಪಯಣ” ತಂಡ ಕಟ್ಟಿದರು. ರಂಗಪಯಣ ಕಟ್ದಾಗಿನಿಂದ ಪಯಣ ನಿಲ್ಲದೆ ಇಂದಿಗೂ ಕೂಡ ಸಾಗುತ್ತಾ 12 ವರ್ಷಗಳನ್ನು ಪೂರೈಸಿ 13 ನೇ ವರ್ಷಕ್ಕೆ ಕಾಲಿಡುತ್ತಿದೆ.
ಹೀಗೆ ತಂಡ ಕಟ್ಟಿ ಸಾಗುತ್ತಿದ್ದ ದಿನಗಳಲ್ಲಿ ರಂಗಕರ್ಮಿ ರಾಜ್ ಗುರು ರವರನ್ನ ಪ್ರೇಮಿಸಿ ಕುವೆಂಪು ರವರ ಮಂತ್ರ ಮಾಂಗಲ್ಯದ ಪ್ರಕಾರ ಗುರು ಹಿರಿಯರ ಆರ್ಶೀವಾದದೊಂದಿಗೆ ವಿವಾಹವಾದರು. ಈ ಇಬ್ಬರ ನೇತೃತ್ವದಲ್ಲಿ ಅನೇಕ ನಾಟಕಗಳನ್ನು ಕಟ್ಟಿ ಅದರಲ್ಲಿಯೂ ಕೂಡ ಅಭಿನಯಿಸಿದರು.
ಚಂದ್ರಗಿರಿ ತೀರದಲ್ಲಿ, ಹೇ ರಾಮ್, ಗುಲಾಬಿಗ್ಯಾಂಗ್ ಭಾಗ-1 ಮತ್ತು ಗುಲಾಬಿ ಗ್ಯಾಂಗ್ ಭಾಗ-2, ಭೂಮಿ, ಶ್ರದ್ಧಾ, ಅಕ್ಷರದವ್ವ ಇವರ ಪ್ರಸಿದ್ಧ ನಾಟಕಗಳು.
ಇಲ್ಲಿಯ ತನಕ ಸರಿಸುಮಾರು 800 ರಿಂದ 900 ವೇದಿಕೆಗಳಲ್ಲಿ ಹಲವಾರು ನಾಟಕಗಳಲ್ಲಿ ಹಲವಾರು ಪಾತ್ರಗಳಲ್ಲಿ ಅಭಿನಯಿಸಿದ್ದಲ್ಲದೇ ಕರ್ನಾಟಕ ಹೊರತು ಪಡಿಸಿ ಮುಂಬೈ, ದೆಹಲಿ ಗಳಲ್ಲೂ ನಾಟಕ ಪ್ರಯೋಗ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಂಗಪಯಣ ತಂಡದ ಮೂಲಕ ಆಗಸ್ಟ್ ತಿಂಗಳಲ್ಲಿ ಪ್ರದರ್ಶನಗೊಳ್ಳಲು ಮಗಳಿಗಾಗಿ “ಹೆಸರಿಡದ ನಾಟಕ”ವೊಂದು ತಯಾರಾಗುತ್ತಿದ್ದು, ಮತ್ತು ” ಪೂಲನ್ ದೇವಿ ” ಎಂಬ ನಾಟಕಕ್ಕೂ ಬಣ್ಣ ಹಚ್ಚಲಿದ್ದಾರೆ. ಹಾಗೂ ಜುಲೈ 31ಕ್ಕೆ ಮತ್ತೊಂದು ಹೊಸ ನಾಟಕ ಬೇಲೂರು ರಘುನಂದನ್ ರವರ “ಸಿಂಗಲ್ ಪೇರೆಂಟ್” ಎಂಬ ನಾಟಕದ ಕಥೆ ಸಿದ್ಧವಾಗುತ್ತಿದೆ ಅದರಲ್ಲಿಯೂ ಕೂಡ ಒಂದೊಳ್ಳೆ ಮತ್ತು ಸಾಮಾಜಿಕ ಸಂದೇಶ ನೀಡುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗೆ ಒಂದಿಲ್ಲೊಂದು ನಾಟಕಗಳಲ್ಲಿ, ರಂಗಭೂಮಿ ಕೆಲಸಗಳಲ್ಲಿ ತೊಡಗಿ ಕಾರ್ಯ ನಿರ್ವಹಿಸುತ್ತಿರುವ ತುಂಬು ಪ್ರತಿಭೆಗೆ ಈ ಬೆಳ್ಳಿ ಮಹೋತ್ಸವ ಮತ್ತಷ್ಟು ಹುರುಪು ತುಂಬಲಿ. ನಯನ.ಜೆ.ಸೂಡ ಅವರ ಮುಂದಿನ ಜೀವನ ಮತ್ತು ಕಾರ್ಯಗಳಿಗೆ ಶುಭವಾಗಲಿ
ಎಂದು ಹಾರೈಸುತ್ತಾ ಜನ್ಮ ದಿನದ ಶುಭಾಶಯಗಳು ರಂಗ ಬೆಳ್ಳಿ ಕಿರಣಕ್ಕೆ