1951 ರ ರೈತರ ಕೊಳಗ ಚಳುವಳಿ ನಾ. ಡಿಸೋಜಾ ರವರ ಕಾದಂಬರಿ ಸಿನಿಮಾ ಸೆಟ್ಟೇರಿದೆ
ದೇಶದಲ್ಲಿ ಈಗ ರೈತ ಚಳುವಳಿಯ ಕಾವು ಹೆಚ್ಚಾಗಿದೆ. ಇಂತಹ ಹೊತ್ತಿನಲ್ಲಿಯೇ ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅಂದರೆ 1951ರಲ್ಲಿ ಆರಂಭವಾದ ಕಾಗೋಡು ರೈತ ಚಳುವಳಿಯ ಕುರಿತ ಚಿತ್ರವೊಂದು ಸೆಟ್ಟೇರಿದೆ. ಅದರ ಟೈಟಲ್ ‘ಕೊಳಗ’.
1974ರಲ್ಲಿ ಜಾರಿಯಾದ ಉಳುವವನೇ ಹೊಲದೊಡೆಯ ಐತಿಹಾಸಿಕ ಕಾನೂನಿಗೆ ಮೂಲ ಪ್ರೇರಣೆಯಾಗಿದ್ದ ಈ ಚಳುವಳಿ ಇದೀಗ ಪ್ರಸನ್ನ ಗೊರಲಕೆರೆ ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಸಿನಿಮಾ ಆಗುತ್ತಿದೆ. ನಾ. ಡಿಸೋಜಾ ಅವರು ಬರೆದಿರುವ ’ಕೊಳಗ’ ಕಾದಂಬರಿಯನ್ನು ಆಧರಿಸಿರುವ ಚಿತ್ರ ೫೦ರ ದಶಕದಲ್ಲಿ ಶಿವಮೊಗ್ಗ ಭಾಗದಲ್ಲಿ ನಡೆದ ಭೂ ಮಾಲೀಕರು ಮತ್ತು ಗೇಣಿದಾರರ ನಡುವಿನ ಸಂಘರ್ಷವನ್ನು ತೆರೆಯ ಮೇಲೆ ಅನಾವರಣಗೊಳಿಸಲಿದೆ.
ಹೆಸರೇ ಹೇಳುವಂತೆ ‘ಕೊಳಗ’ ಎನ್ನುವ ಭತ್ತದ ಅಳತೆಯ ಮಾಪನದಲ್ಲಿ ಆಗುತ್ತಿದ್ದ ವ್ಯತ್ಯಾಸ, ಅದರಿಂದ ರೈತರಿಗೆ ಆಗುತ್ತಿದ್ದ ಅನ್ಯಾಯ, ಭೂ ಮಾಲೀಕರ ಶೋಷಣೆಗಳು ಚಿತ್ರದಲ್ಲಿ ಪ್ರಾಧಾನವಾಗಿ ಕಾಣಿಸಿಕೊಳ್ಳಲಿವೆ.
ಸಾಗರ ಮೂಲದ, ಥಿಯೇಟರ್ ಆರ್ಟಿಸ್ಟ್ ಆಗಿರುವ ಪ್ರಸನ್ನ ಅವರೂ ಕಾಗೋಡು ಹೋರಾಟದ ಹಿನ್ನೆಲೆ ಇರುವ ಕುಟುಂಬದವರು. ಇಡೀ ಹೋರಾಟದ ಕಥಾನಕವನ್ನು ಖುದ್ದಾಗಿ ಕೇಳಿಸಿಕೊಂಡು ಬೆಳೆದವರು ಇದೆಲ್ಲಾ ಕಾರಣದಿಂದ ಬಲವಾದ ಕತೆಯನ್ನು ತೆಗೆದುಕೊಂಡು ಅದನ್ನು ಎರಡು ಭಾಗಗಳಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮೊದಲಿಗೆ ಕಾಗೋಡು ಚಳುವಳಿ ಪ್ರಾರಂಭವಾಗಲು ಕಾರಣವನ್ನು ಹೇಳಿದರೆ, ಎರಡನೇ ಭಾಗದಲ್ಲಿ ಚಳುವಳಿಯ ನಂತರ ಏನಾಯಿತು ಎನ್ನುವ ಕತೆಯನ್ನು ಹೇಳಲಿದ್ದಾರೆ.
‘ಸಾಮಾನ್ಯವಾಗಿ ನಮ್ಮ ಇತಿಹಾಸವೇ ನಮಗೆ ಗೊತ್ತಿರುವುದಿಲ್ಲ ಬೇರೆಯವರ ಇತಿಹಾಸವನ್ನು ತಿಳಿಯಲು ಆಸಕ್ತಿ ತೋರುತ್ತಿರುತ್ತೇವೆ. ಇದರ ಜೊತೆಗೆ ನಮ್ಮ, ನಮ್ಮವರ ಹಿನ್ನೆಲೆಯನ್ನು ತಿಳಿಯಬೇಕು. ನಮ್ಮ ಸುತ್ತಮುತ್ತಲೂ ನಡೆದ ಘಟನೆಗಳು, ಅವು ಸೃಷ್ಟಿ ಮಾಡಿದ ಬದಲಾವಣೆಗಳನ್ನು ತಿಳಿದುಕೊಳ್ಳಬೇಕು. ಅವೆಲ್ಲವೂ ದಾಖಲಾಗಿ ಉಳಿಯಬೇಕು. ಈ ನಿಟ್ಟಿನಲ್ಲಿಯೇ ನಾನು ೫೦ರ ದಶಕದಲ್ಲಿ ನಡೆದ ದೊಡ್ಡ ರೈತ ಹೋರಾಟದ ಘಟನಾವಳಿಗಳ ಕಡೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಸಿನಿಮಾ ಮೂಲಕ ಮಾಡಲು ಹೊರಟಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಪ್ರಸನ್ನ.
ಆದಿ ಲೋಕೇಶ್, ನಿಶಿತಾ ಗೌಡ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರೊಂದಿಗೆ ರಂಗಭೂಮಿ ಮತ್ತು ಸ್ಥಳೀಯ ಕಲಾವಿದರು ವಿವಿಧ ಪಾತ್ರಗಳನ್ನು ಮಾಡಲಿದ್ದಾರೆ. ಜ. 22 ರಿಂದ ಸಾಗರ ಸುತ್ತಮುತ್ತಲೂ ಚಿತ್ರೀಕರಣ ಆರಂಭವಾಗಲಿರುವ ‘ಕೊಳಗ’ ಚಿತ್ರಕ್ಕೆ ರಾಜ್‌ಗುರು ಸಂಗೀತ ಇರಲಿದೆ. ಅಸ್ತ್ರ ಫಿಲ್ಮ್ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಿ ಸನ್ನಿಧಿಯಲ್ಲಿ ಮಹೂರ್ತ ನೆರವೇರಿಸಿಕೊಂಡಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಂಡಕ್ಕೆ ಶುಭ ಹಾರೈಸಿದರು.